ಬೆಂಗಳೂರು: ಡಿಸೆಂಬರ್ 4 ರಂದು ನಡೆಯಬೇಕಿದ್ದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಸದಸ್ಯರ ಚುನಾವಣೆಗೆ ಹೈಕೋರ್ಟ್ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಹುದ್ದೆಗಳಿಗೆ ಡಿಸೆಂಬರ್ 4ರಂದು ಚುನಾವಣೆ ನಡೆಸಲು ಭಾರತೀಯ ವಕೀಲರ ಪರಿಷತ್ತು ನವೆಂಬರ್ 19 ರಂದು ನಿರ್ಣಯ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನ ಬಿಸಿಐ ಸದಸ್ಯರಾದ ವಕೀಲ ವೈಆರ್ ಸದಾಶಿವರೆಡ್ಡಿ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ ಸದಾಶಿವರೆಡ್ಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್, ಬಿಸಿಐನ ಹಾಲಿ ಪದಾಧಿಕಾರಿಗಳ ಅಧಿಕಾರಾವಧಿ 2022ರ ಏಪ್ರಿಲ್ 17ರವರೆಗೆ ಇದೆ. ಹಾಗಾಗಿ ಅವಧಿ ಮುಗಿಯುವ 4 ತಿಂಗಳು ಮುಂಚಿತವಾಗಿ ಚುನಾವಣೆ ನಡೆಸುವ ಅಗತ್ಯವಿಲ್ಲ. ಸದಸ್ಯರಿಗೆ ಯಾವುದೇ ಸೂಚನೆ ನೀಡದೇ ಚುನಾವಣಾ ಸಭೆ ನಡೆಸಲಾಗಿದೆ. ಹೀಗಾಗಿ ಚುನಾವಣೆಗೆ ತಡೆ ನೀಡಬೇಕು ಎಂದು ಕೋರಿದರು.
ಇದನ್ನೂ ಓದಿ: ತಂದೆ - ಮಗನ ನಡುವೆ ಆಸ್ತಿ ವಿವಾದ ಕೇಸ್: ತಂದೆಗೆ ಆಸ್ತಿ ಬಿಟ್ಟುಕೊಡುವಂತೆ ಮಗನಿಗೆ ಕೋರ್ಟ್ ತಾಕೀತು
ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ಸಮಿತಿಯ ಅಧಿಕಾರಾವಧಿಯು 2022ರ ಏಪ್ರಿಲ್ ನಲ್ಲಿ ಮುಕ್ತಾಯಗೊಳ್ಳಲಿದೆ. ಅವಧಿ ಮುಗಿಯುವ ಸಮಯ ಇಷ್ಟು ಹತ್ತಿರವಿದ್ದರೂ ಚುನಾವಣೆ ನಡೆಸಲು ಕೈಗೊಂಡಿರುವುದಕ್ಕೆ ಸೂಕ್ತ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟು ಚುನಾವಣೆಗೆ ತಡೆ ನೀಡಿದೆ