ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 2ನೇ ಡೋಸ್ ವ್ಯಾಕ್ಸಿನ್ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ನಿಮ್ಮಿಂದಾಗದೇ ಹೋದರೆ ಅದನ್ನೇ ಹೇಳಿ. ಸತ್ಯವನ್ನು ಜನರಿಗೆ ತಿಳಿಸಿ, ಅವರನ್ನು ಯಾಮಾರಿಸಬೇಡಿ ಎಂದು ಛೀಮಾರಿ ಹಾಕಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ಹಿರಿಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಸರ್ಕಾರವನ್ನ ತರಾಟೆಗೆ ತಗೆದುಕೊಂಡಿದೆ. ವಿಚಾರಣೆ ವೇಳೆ ಕೋವಿಡ್ ಲಸಿಕೆ ಕೊರತೆ ಇದ್ದು, ಮೊದಲನೇ ಡೋಸ್ ಪಡೆದುಕೊಂಡವರಿಗೆ 2ನೇ ಡೋಸ್ ನೀಡಲು ವ್ಯಾಕ್ಸಿನ್ ಇಲ್ಲ ಎಂಬ ಮಾಹಿತಿಗೆ ಕೆಂಡಾಮಂಡಲವಾದ ಪೀಠ, ಸರ್ಕಾರ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದೆ.
ರಾಜ್ಯದಲ್ಲಿ 6 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಸರ್ಕಾರ ಒಂದು ಪರ್ಸೆಂಟ್ ಜನರಿಗೂ ವ್ಯಾಕ್ಸಿನ್ ಹಾಕಿಲ್ಲ. ಇದೇನಾ ನಿಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮದ ರೀತಿ. 31 ಲಕ್ಷ ಜನರಿಗೆ 2ನೇ ಡೋಸ್ ಅನ್ನು ತುರ್ತಾಗಿ ನೀಡಬೇಕಿದೆ. ಇದನ್ನು ಯಾವಾಗ ಒದಗಿಸುತ್ತೀರಿ ಹೇಳಿ. ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ. ಅದನ್ನೇ ನ್ಯಾಯಾಲಯ ದಾಖಲಿಸಿಕೊಳ್ಳಲಿದೆ ಎಂದು ಕಟುವಾಗಿ ಟೀಕಿಸಿತು. ಅಲ್ಲದೇ, ಮುಂದಿನ ಎರಡು ದಿನಗಳಲ್ಲಿ ವ್ಯಾಕ್ಸಿನೇಷನ್ ಮಾಡುವಂತೆ ಆದೇಶಿಸುತ್ತೇವೆ ಎಂದು ಎಚ್ಚರಿಕೆ ನೀಡಿತು.
ವ್ಯಾಕ್ಸಿನೇಷನ್ ಕೊರತೆಗೆ ಸಂಬಂಧಿಸಿದಂತೆ ಪೀಠ ಕೇಂದ್ರ ಸರ್ಕಾರಕ್ಕೂ ತರಾಟೆಗೆ ತೆಗೆದುಕೊಂಡಿತು. ಮೊದಲನೇ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ಸಿಕ್ಕಿಲ್ಲ. 2ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ. ಈ ಹಿಂದಿನ ಅಂಕಿ ಅಂಶಗಳ ಮಾಹಿತಿಯಂತೆ ರಾಜ್ಯದಲ್ಲಿ ತುರ್ತಾಗಿ 26 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಬೇಕಿದೆ. ಈ ಅಂತರವನ್ನು ಹೇಗೆ ಸರಿಪಡಿಸುತ್ತೀರಿ. ಡೋಸ್ ನೀಡುವುದು ವಿಳಂಬವಾದರೆ ವ್ಯಾಕ್ಸಿನೇಷನ್ ವಿಫಲವಾಗುವುದಿಲ್ಲವೇ ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ಎಎಸ್ಜಿ ಐಶ್ವರ್ಯ ಭಾಟಿ, ವ್ಯಾಕ್ಸಿನ್ ವಿಳಂಬವಾದರೆ ನಿಷ್ಪಲವಾಗುವುದಿಲ್ಲ. ಕೋವ್ಯಾಕ್ಸಿನ್ 2ನೇ ಡೋಸ್ಗೆ 6 ವಾರ ಕಾಲಾವಕಾಶವಿದೆ. ಕೋವಿಶೀಲ್ಡ್ಗೆ 8 ವಾರ ಕಾಲಾವಕಾಶವಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ ತಜ್ಞರ ಸಮಿತಿಯೂ ಪರಿಶೀಲನೆ ನಡೆಸುತ್ತಿದ್ದು ಎರಡು ದಿನದಲ್ಲಿ ಅಭಿಪ್ರಾಯ ತಿಳಿಸಲಿದ್ದಾರೆ ಎಂದರು.
ಅಲ್ಲದೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿ ನೀಡಿ ಕೊಟ್ಟಿರುವ ಲಸಿಕೆಯಲ್ಲಿ ಶೇ.70ರಷ್ಟನ್ನು 2ನೇ ಡೋಸ್ಗೆ ಬಳಸಲು ತಿಳಿಸಿತ್ತು. ಆದರೆ ರಾಜ್ಯ ಮಾರ್ಗಸೂಚಿ ಪಾಲಿಸಿಲ್ಲ ಎಂದು ವಿವರಿಸಿದರು.
ವಾದ ಪ್ರತಿವಾದ ಆಲಿಸಿದ ಪೀಠ, 2ನೇ ಡೋಸ್ ನೀಡದಿದ್ದರೆ ಜನರು ಆರೋಗ್ಯಯುತವಾಗಿ ಜೀವಿಸುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ 2ನೇ ಡೋಸ್ಗೆ ಎಷ್ಟು ಪ್ರಮಾಣದ ವ್ಯಾಕ್ಸಿನ್ ಬೇಕು ಎಂಬುದರ ಬಗ್ಗೆ ಕೇಂದ್ರಕ್ಕೆ ಅಂಕಿಅಂಶಗಳನ್ನು ಒದಗಿಸಬೇಕು. ಕೇಂದ್ರ ಸರ್ಕಾರ ಕೊರತೆ ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಇನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ 3 ಮಾರ್ಗಸೂಚಿ ಪತ್ರ ಬರೆದಿದ್ದು, ಅವನ್ನು ರಾಜ್ಯ ಸರ್ಕಾರ ಏಕೆ ಪಾಲಿಸಿಲ್ಲ ಎಂಬುದಕ್ಕೆ ವಿವರಣೆ ನೀಡಬೇಕು. ಹಾಗೆಯೇ, 2ನೇ ಡೋಸ್ ವ್ಯಾಕ್ಸಿನೇಷನ್ಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.