ಬೆಂಗಳೂರು : ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಲಿಯೋನ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಈ ಕುರಿತು ಮಂಡ್ಯದ ವಕೀಲ ವಿಶಾಲ ರಘು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅರ್ಜಿದಾರರ ಪರ ವಕೀಲ ಪವನ್ ಚಂದ್ರ ಶೆಟ್ಟಿ ವಿಚಾರಣೆಗೆ ನಿರಂತರ ಗೈರು ಹಾಜರಾದ ಹಿನ್ನೆಲೆ ಮತ್ತು ಅರ್ಜಿಯ ಕೋರಿಕೆ ಸಿಂಧುವಲ್ಲದ ಹಿನ್ನೆಲೆ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಡಿ ಬಂಧಿತಳಾದ ಬಳಿಕ ತನಿಖಾಧಿಕಾರಿಗಳು ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ ಅಮೂಲ್ಯಳಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ರದ್ದುಗೊಳಿಸಬೇಕು. ಹಾಗೆಯೇ, ಅಮೂಲ್ಯಳ ಹಿಂದೆ ದೇಶದ್ರೋಹಿಗಳಿರುವ ಗುಮಾನಿ ಇದ್ದು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೋರಿ ವಕೀಲ ವಿಶಾಲ ರಘು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲ ಪವನ್ ಚಂದ್ರ ಶೆಟ್ಟಿ ವಿಚಾರಣೆಗೆ ಹಾಜರಾಗಬೇಕಿತ್ತು. ಮೊದಲ ವಿಚಾರಣೆಗೆ ಹಾಜರಾಗಿದ್ದ ಪವನ್ ಚಂದ್ರ ಅವರಿಗೆ ಹೈಕೋರ್ಟ್ ಹಲವು ಪ್ರಶ್ನೆಗಳನ್ನು ಕೇಳಿತ್ತು. ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ನೀಡಿರುವ ಜಾಮೀನನ್ನು ಯಾವ ಕಾರಣಕ್ಕಾಗಿ ರದ್ದುಪಡಿಸಬೇಕು ಮತ್ತು ಅಮೂಲ್ಯಳ ಪ್ರಕರಣವನ್ನು ಎನ್ಐಎಗೆ ಯಾಕೆ ವಹಿಸಬೇಕು ಎಂಬುದಕ್ಕೆ ಸಕಾರಣಗಳನ್ನು ನೀಡಿವಂತೆ ತಾಕೀತು ಮಾಡಿತ್ತು. ನಂತರದ ವಿಚಾರಣೆಗಳಿಗೆ ಪವನ್ ಚಂದ್ರ ಶೆಟ್ಟಿ ಗೈರು ಹಾಜರಾಗಿದ್ದರು.
ವಕೀಲ ಶೆಟ್ಟಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಸೂಕ್ತ ದಿನಾಂಕ ನಿಗದಿಪಡಿಸುವ ಕುರಿತು ರಿಜಿಸ್ಟ್ರಾರ್ ಜನರಲ್ ಸೂಚನೆ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಎರಡು ಮೂರು ಬಾರಿ ವಿಚಾರಣೆಗೆ ವಕೀಲ ಗೈರು ಹಾಜರಾಗಿದ್ದರಿಂದ ಪ್ರಕರಣದಲ್ಲಿರುವ ಮನವಿ ವಿಚಾರಣಾ ಯೋಗ್ಯವಲ್ಲ ಎಂದು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.