ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಾಜಕಾಲುವೆಗಳಿಗೆ ಬಿದ್ದು ಸಾರ್ವಜನಿಕರು ಸಾವಿಗೀಡಾಗುತ್ತಿರುವ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಈ ಕೂಡಲೇ ತೆರೆದ ರಾಜಕಾಲುವೆಗಳಿಗೆ ಬೇಲಿ ಹಾಕುವಂತೆ ಬಿಬಿಎಂಪಿಗೆ ಎಚ್ಚರಿಕೆ ಕೊಟ್ಟು ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತು.
ತೆರೆದ ರಾಜಕಾಲುವೆಗಳಿಂದ ಜನರು ಬಿದ್ದು ಮೃತಪಟ್ಟಿರುವ ಪ್ರಕರಣದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ಕುರಿತು ಸಂಪೂರ್ಣವಾದ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಸೂಚಿಸಿದೆ.
ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಈ ದುರಂತಗಳು ಸಂಭವಿಸಲು ಕಾರಣ. ಮಳೆಗಾಲ ಬಂತೆಂದರೆ ಅಸುರಕ್ಷಿತ ರಾಜಕಾಲುವೆಗಳು ಅಮಾಯಕರನ್ನು ಬಲಿ ಪಡೆಯುತ್ತಿವೆ. ಅದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬಿಬಿಎಂಪಿ ಪರ ವಾದ ನಡೆಸಿದ ವಕೀಲರು, ತೆರೆದಿರುವ ಸ್ಟಾರ್ಮ್ ವಾಟರ್ ಡ್ರೈನ್‌ಗಳ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಅವುಗಳಿಗೆ ಬೇಲಿ ಹಾಕಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹಾಗೆಯೇ ರಾಜಕಾಲುವೆಗಳಲ್ಲಿ ಬಿದ್ದು ಮೃತಪಟ್ಟಿರುವ ಎಲ್ಲಾ ಮಾಹಿತಿಯನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸುವುದಾಗಿ ನ್ಯಾಯಾಪೀಠಕ್ಕೆ ಮನವಿ ಮಾಡಿದರು.
ಇದನ್ನ ಆಲಿಸಿದ ನ್ಯಾಯಾಪೀಠ ಘಟನೆ ನಡೆದ ರಾಜಕಾಲುವೆಗಳಿಗೆ ಬೇಲಿ ಹಾಕುವಂತೆ ಬಿಬಿಎಂಪಿಗೆ ಎಚ್ಚರಿಕೆ ನೀಡಿ ಜನವರಿ 10ವರೆಗೂ ಸಮಯ ನೀಡಿದೆ. ಅಷ್ಟರೊಳಗೆ ಈ ಕೆಲಸ ಮುಗಿಸಬೇಕು ಎಂದು ಸೂಚಿಸಿದೆ.