ಬೆಂಗಳೂರು: ಅನ್ಲಾಕ್ ಬೆನ್ನಲ್ಲೆ ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ನಗರದೆಲ್ಲೆಡೆ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಎಲ್ಲೆಂದರಲ್ಲಿ ರಸ್ತೆಯನ್ನು ಅಗೆಯಲಾಗಿದ್ದು, ಸರಕು ಸಾಮಗ್ರಿಗಳನ್ನು ರಸ್ತೆಯಲ್ಲೇ ಬಿಡಲಾಗಿದೆ. ಮಣ್ಣಿನ ರಾಶಿ ಹಾಗೂ ಹಲವೆಡೆ ರಸ್ತೆಗಳು ಬಂದ್ ಆಗಿವೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ದಟ್ಟಣೆಯಾಗಿದೆ. ಜನರು ಬಿಸಿಲ ಬೇಗೆಯಲ್ಲಿ, ಕಿ.ಮೀ ಗೂ ಹೆಚ್ಚು ದೂರದವರೆಗೆ ವಾಹನಗಳ ದಟ್ಟಣೆಯಿಂದ ನಲುಗಬೇಕಾಯಿತು.
ಮೈಸೂರು ಬ್ಯಾಂಕ್ ಸರ್ಕಲ್ ಹಾಗೂ ಪ್ಯಾಲೇಸ್ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ನಡೆಯುತ್ತಿರುವುದರಿಂದ ಕಳೆದ ಎರಡು ತಿಂಗಳಿಂದಲೂ ಅಂಡರ್ ಪಾಸ್ ಬಂದ್ ಆಗಿದೆ. ಇದರಿಂದಾಗಿ ಶೇಷಾದ್ರಿಪುರಂ ರಸ್ತೆಯಲ್ಲೇ ವಾಹನ ದಟ್ಟಣೆ ಹೆಚ್ಚಾಗಿ ಕೆ.ಆರ್. ಸರ್ಕಲ್ನ ವಾಹನ ದಟ್ಟಣೆ ಫ್ರೀಡಂ ಪಾರ್ಕ್ವರೆಗೂ ಇತ್ತು. ಮೆಜೆಸ್ಟಿಕ್ಗೆ ಸಂಪರ್ಕ ಕಲ್ಪಿಸುವ ಕೆ.ಜಿ ರಸ್ತೆಯಲ್ಲೂ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಧೂಳಿನಲ್ಲೇ ಸಂಚಾರ ನಡೆಸಬೇಕಾಯ್ತು.
ರಾಜಭವನ ರಸ್ತೆ, ಇನ್ ಫೆಂಟ್ರಿ ರಸ್ತೆಯಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಟ್ರಾಫಿಕ್ ಜಾಂನಲ್ಲಿ ಜನ ಸಿಲುಕಬೇಕಾಯಿತು. ಇದರಿಂದ ಚಾಲುಕ್ಯ ಸರ್ಕಲ್ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕಾರ್ಪೋರೇಷನ್ ಸರ್ಕಲ್ನಲ್ಲೂ ಏಕಾಏಕಿ ಸಾವಿರಾರು ವಾಹನಗಳು ಓಡಾಟ ನಡೆಸಿದ್ದರಿಂದ ಸಿಗ್ನಲ್ ಮ್ಯಾನೇಜ್ ಮಾಡಲಾಗದೇ ತಾಸುಗಟ್ಟಲೇ ಜನ ಬಿಸಿಲಲ್ಲೇ ನಲುಗುವಂತಾಯಿತು.
ನಗರದ ಶಿವಾನಂದ ಸರ್ಕಲ್ ರಸ್ತೆಯಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ರೇಸ್ ಕೋರ್ಸ್ ರಸ್ತೆ, ಕುಮಾರ ಕೃಪಾ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಒಟ್ಟಿನಲ್ಲಿ ಅನೇಕ ಪ್ರಮುಖ ರಸ್ತೆಗಳಲ್ಲಿ, ಸರ್ಕಲ್ಗಳಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಟ್ರಾಫಿಕ್ ಇದ್ದು, ಕಾಮಗಾರಿ ಮುಗಿಯುವವರೆಗೂ ಜನರು ದಟ್ಟಣೆಯಲ್ಲೇ ಪರದಾಡಬೇಕಿದೆ.