ಬೆಂಗಳೂರು/ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಎಡಬಿಡದೆ ಮಳೆ ಸುರಿಯುತ್ತಿದ್ದು, (Heavy Rain in Karnataka) ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆಯಿಂದಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಆಗದೇ ಕಷ್ಟ ಎದುರಿಸುತ್ತಿದ್ದಾರೆ. 2021-22ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ವ ಪ್ರಾಥಮಿಕ ಹಾಗೂ 1 ರಿಂದ 10ನೇ ತರಗತಿ ಎಲ್ಲಾ ಶಾಲೆಗಳನ್ನು ಕೋವಿಡ್-19 ರ ನಂತರ ಭೌತಿಕವಾಗಿ ಪ್ರಾರಂಭಿಸಿದ್ದು, ಶಾಲೆಗಳು ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ.
ಆದರೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬಂದು ಹೋಗಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಜಿಲ್ಲೆಗಳ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆಗಳಿಗೆ ರಜೆಯನ್ನು (Schools closed in Karnataka) ಘೋಷಿಸುವ ಕುರಿತು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರಜೆ ಘೋಷಣೆ ಮಾಡಿದ ದಿನಗಳ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವ ಷರತ್ತಿಗೊಳಪಟ್ಟು ರಜೆ ಘೋಷಣೆ ಮಾಡುವಂತೆ ಶಿಕ್ಷಣ ಇಲಾಖೆ ತಿಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ವರುಣಾರ್ಭಟ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಗುರುವಾರ ಇಡೀ ದಿನ ಮಳೆ ಸುರಿದಿದ್ದು, ಮುಂದಿನ ಎರಡು ಮೂರು ದಿನಗಳು ಕೂಡ ಮಳೆಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಎರಡು ದಿನಗಳ ಕಾಲ ರಜೆ ಘೊಷಿಸುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮೌಖಿಕ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎರಡು ದಿನ ರಜೆ ಘೋಷಿಸಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್. ಎಂ.ಗಂಗಮಾರೇಗೌಡ ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ಶುಕ್ರವಾರ (ನ.19), ನವೆಂಬರ್ 20 ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನವೆಂಬರ್ 21ರಂದು ಶನಿವಾರ ಪೂರ್ಣದಿನ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು ಸೇರಿದಂತೆ ಪದವಿ ಪೂರ್ವ ಕಾಲೇಜು ಹಾಗೂ ಅಂಗನವಾಡಿಗಳಿಗೆ ನ.19 ಮತ್ತು 20 ರಜೆ ಘೋಷಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ. ಕನಕ ಜಯಂತಿ ಅಂಗವಾಗಿ ಸೋಮವಾರ ಸರ್ಕಾರಿ ರಜೆ ಇರಲಿದೆ.
ಮಳೆ ಹಿನ್ನೆಲೆ ರಾಮನಗರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೂ ನ.19 ರಂದು ಜಿಲ್ಲಾಡಳಿತ ರಜೆ ಘೋಷಿಸಿದೆ. ಹಾಗೆಯೇ ಕೋಲಾರದ ಜಿಲ್ಲಾಡಳಿತವು ನ.19, ನ,20 ರಂದು ರಜೆ ಘೋಷಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ: 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ