ಬೆಂಗಳೂರು: ಇಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಕಡೆ ಮಳೆಯಾಗಿದೆ. ಶಿರಾಲಿಯಲ್ಲಿ 8, ಕುಂದಾಪುರ 4, ಕಾರವಾರ 4, ಆಗುಂಬೆಯಲ್ಲಿ 4 ಸೆಂಟಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಓದಿ: ಸೋಂಕು ಹೆಚ್ಚಿರುವ 8 ಜಿಲ್ಲೆ ಅನ್ಲಾಕ್ ಬಗ್ಗೆ ಸಂಜೆ ನಿರ್ಧಾರ
ಈ ಕುರಿತು ಇಂದು ಮಾಹಿತಿ ನೀಡಿದರುವ ಅವರು, ಬಂಗಾಳ ಉಪಸಾಗರದಲ್ಲಿ ಜೂನ್ 11 ರಂದು ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ಇದರಿಂದ ಜೂನ್ 12 ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಏರಿಕೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರಕನ್ನಡ, ದ.ಕನ್ನಡದಲ್ಲಿ ಜೂನ್ 10 ರಿಂದ 14 ರವರೆಗೆ ವ್ಯಾಪಕ ಮಳೆಯಾಗಲಿದ್ದು, ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂನ್ 12 ರಿಂದ 14 ರವರೆಗೆ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 10 ರಿಂದ 12 ರವರೆಗೆ ಕೆಲವು ಕಡೆ ಮಳೆಯಾಗಲಿದ್ದು, 13 ರಿಂದ 14 ನೇ ತಾರೀಕಿನವರೆಗೆ ಬಹುತೇಕ ಎಲ್ಲಾ ಕಡೆ ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಜೂನ್ 12 ರಿಂದ 14 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ ಜಿಲ್ಲೆಗಳಿಗೆ ಜೂನ್ 13 ಮತ್ತು 14 ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕರು ವಿವರಿಸಿದ್ದಾರೆ.