ಬೆಂಗಳೂರು : ನಿನ್ನೆ (ಸೋಮವಾರ) ರಾತ್ರಿ ಮತ್ತು ಇಂದು ಸುರಿದ ಭಾರಿ ಮಳೆಗೆ ನಗರದ ತುಂಬೆಲ್ಲಾ ಮಳೆ ನೀರು ನಿಂತಿದೆ. ಅದರಲ್ಲಿಯೂ ಕೊಡಿಗೇಹಳ್ಳಿ ಮುಖ್ಯ ರಸ್ತೆಯಲ್ಲಿ ಅಂಡರ್ ಪಾಸ್ನಲ್ಲಿ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿತ್ತು.
ಅಂಡರ್ ಪಾಸ್ನಲ್ಲಿ ಸುಮಾರು ನಾಲ್ಕೈದು ಅಡಿಯಷ್ಟು ಮಳೆ ನೀರು ನಿಂತಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಬೆಳಗ್ಗೆ ಬಿಬಿಎಂಪಿ ಸಿಬ್ಬಂದಿ ಬಂದು ರಸ್ತೆಯಲ್ಲಿ ಬ್ಯಾರಿಕೇಡ್ ಮತ್ತು ಡ್ರಮ್ಗಳನ್ನು ಹಾಕಿ ಅಂಡರ್ ಪಾಸ್ ರಸ್ತೆಯನ್ನು ಸ್ಥಗಿತಗೊಳಿಸಿದ್ದಾರೆ.
ರಸ್ತೆ ಸ್ಥಗಿತಗೊಂಡಿರುವುದರಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಪೋಷಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು. ರಸ್ತೆ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಗೆ ಒಂದು ಕಿ. ಮೀ ಪ್ರಯಾಣವನ್ನು ನಾಲ್ಕೈದು ಕಿ. ಮೀ.ವರೆಗೆ ಸುತ್ತಿ ಬಳಸಿ ಬೇರೆ ಬೇರೆ ಏರಿಯಾಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಎರಡು ಪಂಪ್ಗಳನ್ನು ಬಳಸಿ ಅಂಡರ್ ಪಾಸ್ನಲ್ಲಿ ನಿಂತಿರುವ ಮಳೆ ನೀರನ್ನು ತೆಗೆಯಲಾಗುತ್ತದೆ. ಮಳೆ ಬರುವಾಗ ನಮಗೆ ತೊಂದರೆಗಳು ಕಾಮನ್ ಆಗಿದೆ. ಇಂದು ರಾತ್ರಿ ಕೂಡ ಮಳೆ ಬಂದರೆ ನಾಳೆಯೂ ಕೂಡ ರಸ್ತೆ ಬಂದ್ ಆಗುವುದರಲ್ಲಿ ಅನುಮಾನವಿಲ್ಲ. ಇಷ್ಟೆಲ್ಲ ಆದರೂ ಕೂಡ ಸ್ಥಳಕ್ಕೆ ಪಾಲಿಕೆಯ ಯಾವುದೇ ಹಿರಿಯ ಅಧಿಕಾರಿಗಳು ಭೇಟಿ ನೀಡಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಅ.10 ರಿಂದ 12ರವರೆಗೆ ಭಾರಿ ಮಳೆ: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್