ಬೆಂಗಳೂರು: ಆತ್ಮಸಾಕ್ಷಿಯ ಮತ ಯಾರಿಗೂ ಕಾಣದಂತೆ ಜೆಡಿಎಸ್ಗೂ ಬರುವ ನಿರೀಕ್ಷೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಖಾಸಗಿ ರೆಸಾರ್ಟ್ನಿಂದ ಬಸ್ ಮೂಲಕ ತಮ್ಮ ಶಾಸಕರ ಜತೆ ವಿಧಾನಸೌಧಕ್ಕೆ ಹೆಚ್ಡಿಕೆ ಆಗಮಿಸಿದರು.
ಈ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಜೊತೆಯಲ್ಲಿ 31 ಶಾಸಕರು ಇದ್ದಾರೆ. ಶ್ರೀನಿವಾಸ್ ಗೌಡ ಬಹಿರಂಗವಾಗಿ ಪ್ರಕಟ ಮಾಡಿದ್ದಾರೆ. ಪಕ್ಷೇತರರ ಜೊತೆ ಪ್ರತ್ಯೇಕವಾಗಿ ಮಾತನಾಡಿಲ್ಲ. ನಾನು ಹಲವರ ಬಳಿ ಮನವಿ ಮಾಡಿಕೊಂಡಿದ್ದೇನೆ. ಆದರೆ, ಒಳಗಡೆ ಹದ್ದು ಕಾಯೋ ಹಾಗೆ ಕಾಯ್ತಾ ಇದ್ದಾರೆ. ಜಾತ್ಯತೀತ ಶಕ್ತಿ ಬಲಪಡಿಸುತ್ತೇವೆ ಎಂದು ಹೇಳಿ ಕೋಮುವಾದ ಶಕ್ತಿಗೆ ಹಾಲೆರೆಯುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಬಿಜೆಪಿಯನ್ನು ಗೆಲ್ಲಿಸಲು ರಮೇಶ್ ಕುಮಾರ್, ಸಿದ್ದರಾಮಯ್ಯ ಪ್ರಯತ್ನ ಪಟ್ಟಿದ್ದಾರೆ. ಅವರಿಗೆ ಅಭಿನಂದನೆ. ಇಂದು ಸಂಜೆಯೊಳಗೆ ಬಿಜೆಪಿ ಬಿ ಟೀಮ್ ಯಾರು ಅಂತಾ ಗೊತ್ತಾಗುತ್ತದೆ. ಆತ್ಮಸಾಕ್ಷಿಯ ಮತ ನಮಗೂ ಬಾಣದ ರೀತಿಯಲ್ಲಿ ಬೀಳಬಹುದು ಎಂಬ ಭರವಸೆ ಇದೆ ಎಂದರು.
ಸಿಟಿ ರವಿ ಕಾಂಗ್ರೆಸ್ ಶಾಸಕಾಂಗ ಕಚೇರಿಗೆ ಅಭಿನಂದನೆ ಸಲ್ಲಿಸಲು ಹೋಗಿರುವುದು. ಇದನ್ನು ಬೈ ಮಿಸ್ ಆಗಿ ಹೋಗಿದ್ದೇನೆ ಎನ್ನಲು ಆಗಲ್ಲ ಬಿಡಿ. ಇದು ಉದ್ದೇಶಪೂರ್ವಕವಾಗಿ ಹೋಗಿರುವುದು. ಆದರೆ, ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಅದಕ್ಕೆ ಧನ್ಯವಾದ ಹೇಳಲು ಹೋಗಿರುತ್ತಾರೆ. ಅಪ್ಪಿತಪ್ಪಿ ಹೋಗಿದ್ದಾರೆ ಎಂದರೆ ಯಾರಾದರೂ ನಂಬುತ್ತಾರಾ? ಎಂದು ಪ್ರಶ್ನಿಸಿದರು.
ನಾವು ಯಾರ ಬಗ್ಗೆಯೂ ವೈಯಕ್ತಿವಾಗಿ ಮಾತನಾಡಿಲ್ಲ. ಜೆಡಿಎಸ್ ಎರಡನೇ ಪ್ರಾಶಸ್ತ್ಯ ಮತವೂ ಬೀಳದಂತೆ ನೋಡಿಕೊಳ್ಳಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ನಾಯಕರು ಶ್ರೀನಿವಾಸ್ ಗೌಡ ಅವರನ್ನು ಬ್ರೈನ್ ವಾಶ್ ಮಾಡಿದ್ದಾರೆ. ಈ ಮೂಲಕ ರಮೇಶ್ ಕುಮಾರ್, ಸಿದ್ದರಾಮಯ್ಯ ಸೇರಿ ಬಿಜೆಪಿಯನ್ನ ಗೆಲ್ಲಿಸಿದ್ದಾರೆ. ಆದರೂ ನಾವು ಭರವಸೆ ಕಳೆದುಕೊಂಡಿಲ್ಲ ಎಂದರು.
ಇದನ್ನೂ ಓದಿ: ಮತದಾನ ಮಾಡಿದ್ದನ್ನು ಡಿಕೆಶಿಗೆ ಪ್ರದರ್ಶಿಸಿದ ಎಚ್.ಡಿ ರೇವಣ್ಣ; ಬಿಜೆಪಿಯಿಂದ ಭಾರಿ ಆಕ್ಷೇಪ