ಬೆಂಗಳೂರು: ನಾವು ಮೊದಲು ಪಾದಯಾತ್ರೆ ಮಾಡಿದರೆ ನಮಗೆ ಕ್ರೆಡಿಟ್ ಬರುತ್ತದೆಂದು ಕಾಂಗ್ರೆಸ್‌ನವರು ಮೊದಲೇ ಪಾದಯಾತ್ರೆ ಮಾಡ್ತಿದ್ದಾರೆ. ಕ್ರೆಡಿಟ್-ಡೆಬಿಟ್ ಬಗ್ಗೆ ಯಾರೂ ಯೋಚನೆ ಮಾಡಬೇಕಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕಾಂಗ್ರೆಸ್ಗೆ ಟಾಂಗ್ ಕೊಟ್ಟರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ 'ಜನತಾ ಪತ್ರಿಕೆ 'ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾವೇರಿ ಹೋರಾಟದ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಮನಗೆ ಬಂದಿದ್ದನ್ನು ನಾನು ನೋಡಿದ್ದೇನೆ. ಹೀಗಾಗಿ ಸಮಯ ಬಂದಾಗ ನಾವು ಹೋರಾಟ ಮಾಡೋಣ. ಪಾದಯಾತ್ರೆ ಮಾಡುವುದು ಅಷ್ಟು ಸುಲಭವಲ್ಲ. ನಾವು ಈಗಾಗಲೇ ರಾಜ್ಯಪಾಲರಿಗೆ ಮನವಿ ಪತ್ರ ಕೊಟ್ಟಿದ್ದೇವೆ ಎಂದರು.
ಪಕ್ಷದ ಕಾರ್ಯಕರ್ತರು ನಿಷ್ಠೆಯಿಂದ ದುಡಿಯಬೇಕು. ಅಧಿಕಾರಕ್ಕಾಗಿ ಈ ಪಕ್ಷ ಸ್ಥಾಪನೆ ಮಾಡಿಲ್ಲ. ಜೆಪಿ ಅವರ ಹೋರಾಟದಿಂದ ಪಕ್ಷ ಬಂದಿದೆ. ಈ ಪಕ್ಷವನ್ನು ಮುಗಿಸುತ್ತೇನೆ ಅನ್ನೋರಿಗೆ ಈ 'ಜನತಾ ಪತ್ರಿಕೆ' ಮೂಲಕ ಉತ್ತರ ಕೊಡಿ. ನಮ್ಮ ಶತ್ರುಗಳು ತುಂಬಾ ಇದ್ದಾರೆ. ಇವತ್ತು ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಪೈಪೋಟಿಯಲ್ಲಿವೆ. ಆದರೆ ಹಳ್ಳಿಗಳಿಗೆ ಸೋಶಿಯಲ್ ಮೀಡಿಯಾ ತಲುಪುವುದಿಲ್ಲ. ಹೀಗಾಗಿ ಈ ಪತ್ರಿಕೆಯನ್ನು ಬಲಪಡಿಸಿ. ಕುಮಾರಸ್ವಾಮಿ ಈ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದು ನಿಷ್ಕ್ರಿಯ ಆಗದಂತೆ ನೋಡಿಕೊಳ್ಳಿ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಕಾಂಗ್ರೆಸ್ಗೆ ಪರ್ಯಾಯವಾಗಿ ಅನೇಕ ಮುಖಂಡರು ಸೇರಿ ಜನತಾ ಪಾರ್ಟಿ ತೀರ್ಮಾನ ಮಾಡಿದ್ರು. ರಾಜಕೀಯದಲ್ಲಿ ಏಳುಬೀಳು ಕಂಡಿದ್ದೇನೆ. ಅವತ್ತು ಕಾಂಗ್ರೆಸ್ಗೆ ಪೆಟ್ಟು ಬಿದ್ದಿದ್ರೆ, 9 ರಾಜ್ಯಗಳಲ್ಲಿ ನಶಿಸಿ ಹೋಗುತ್ತಿತ್ತು. ನಾನು ಸೋಲು-ಗೆಲುವಿನ ಬಗ್ಗೆ ಹೇಳಲ್ಲ. ಎಲ್ಲವನ್ನೂ ಎದುರಿಸಿದ್ದೇವೆ ಎಂದರು.
'ಇದು ಪಕ್ಷದ ಮುಖವಾಣಿಯಲ್ಲ':
ಜನತಾ ಪತ್ರಿಕೆ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ, ಇದು ಪಕ್ಷದ ಮುಖವಾಣಿಯಲ್ಲ. ಪತ್ರಿಕೆ ನಡೆಸೋದು ಅಷ್ಟು ಸುಲಭದ ಹಾದಿಯಲ್ಲ. ಎಲ್ಲವನ್ನೂ ದಾಟಿ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಇಲ್ಲಿ ಕೆಲಸ ಮಾಡುವವರು ಪತ್ರಿಕಾ ಮನೋಧರ್ಮದಿಂದ ಕೆಲಸ ಮಾಡಬೇಕು. ನಾವು ಮಾಡುವ ಕೆಲಸವನ್ನು ಜನರ ಮುಂದೆ ಇಡಬೇಕು. ಆಗ ಮಾತ್ರ ಪತ್ರಿಕೆ ಬಗ್ಗೆ ಜನರಿಗೆ ಒಂದು ನಂಬಿಕೆ ಮೂಡುತ್ತದೆ ಎಂದು ಹೇಳಿದರು.