ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಇಂದು ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಪೇಜಾವರ ಶ್ರೀ ವಿಶ್ವೇಶ ತೀರ್ಥರ ಬೃಂದಾವನಕ್ಕೆ ಭೇಟಿ ನೀಡಿದರು.
ಶ್ರೀಗಳ ಕೃಷ್ಣೈಕ್ಯದ ವೇಳೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಕೇರಳದಲ್ಲಿ ಇದ್ದಿದ್ದರಿಂದ ಅಂತಿಮ ನಮನ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ವಿದ್ಯಾಪೀಠದಲ್ಲಿನ ಸ್ವಾಮಿಗಳ ಬೃಂದಾವನಕ್ಕೆ ಭೇಟಿ ನೀಡಿ, ನಮನ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ದೇವೇಗೌಡರು, ನನಗೂ ಕೃಷ್ಣಮಠಕ್ಕೂ 40 ವರ್ಷಕ್ಕಿಂತ ಹೆಚ್ಚು ಒಡನಾಟವಿದೆ. ಅನೇಕ ಬಾರಿ ಶ್ರೀಗಳನ್ನ ಭೇಟಿ ಮಾಡಿ ದರ್ಶನ ಮಾಡಿಕೊಂಡು ಬಂದಿದ್ದೇನೆ. 3 ತಿಂಗಳ ಹಿಂದೆ ಉಡುಪಿಗೆ ಚಿಕಿತ್ಸೆಗೆ ಹೋಗಿದ್ದೆ. ಆಗ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ. ಇಂತಹ ಘಟನೆ ಆಗುತ್ತದೆ ಅಂತ ನಾನು ಊಹೆ ಮಾಡಿರಲಿಲ್ಲ. ಈ ಘಟನೆ ನಂಬೋದಕ್ಕೆ ಆಗುತ್ತಿಲ್ಲ. ಆದ್ರೆ ಕೃಷ್ಣ ಕರೆದಾಗ ಹೋಗಲೇ ಬೇಕು. ಇದು ಜಗತ್ತಿನ ನಿಯಮ ಎಂದು ಸ್ಮರಿಸಿದರು.
ಶ್ರೀಗಳು ತಮ್ಮ ಪರ್ಯಾಯದಲ್ಲಿ ಅನೇಕ ಕೆಲಸ ಮಾಡಿದ್ದಾರೆ. ದಲಿತ ಕೇರಿಗೆ ಹೋಗಿ ಅಸ್ಪೃಶ್ಯತೆ ನಿವಾರಣೆ ಕೆಲಸ ಮಾಡಿದ್ದರು. ಅದು ತೋರಿಕೆಗೆ ಮಾಡಿಲ್ಲ, ಸಮಾಜದಲ್ಲಿ ಬದಲಾವಣೆ ತರಲು ಮಾಡಿದ್ದರು. ಮಠದಲ್ಲೇ ಇಫ್ತಾರ್ ಕೂಟ ಮಾಡಿ, ಸಮಾಜದ ಸುಧಾರಣೆ ಮುಂದಾದರು. ಅನೇಕ ಬಾರಿ ನಾನು, ನನ್ನ ಪತ್ನಿ ಮಠಕ್ಕೆ ಹೋಗಿ ಆಶೀರ್ವಾದ ಪಡೆದಿದ್ದೇವೆ. ಅವರ ಕನಸಿನಂತೆ ವಿದ್ಯಾಪೀಠದಲ್ಲಿ ಬೃಂದಾವನ ಆಗಿದೆ. ಶ್ರೀಗಳು ಅನೇಕ ಸಾರಿ ನನ್ನನ್ನ ಕರೆದು ದೆಹಲಿಯಲ್ಲಿ ಮಠ ಸ್ಥಾಪನೆ ಮಾಡಲು ನರಸಿಂಹರಾವ್ ಕಾಲದಲ್ಲಿ ಜಾಗ ಕೇಳಿದ್ದರು. ನಾನು ಪಿಎಂ ಆದಾಗ ಅತ್ಯಂತ ಕಡಿಮೆ ಮೊತ್ತದಲ್ಲಿ ಪರಿಹಾರ ನಿಗದಿ ಮಾಡಿಕೊಟ್ಟು ಜಾಗ ಕೊಟ್ಟೆ. ಇದನ್ನು ಶ್ರೀಗಳು ಅನೇಕ ಬಾರಿ ಹೇಳಿದ್ದಾರೆ ಎಂದು ವಿವರಿಸಿದರು.