ಬೆಂಗಳೂರು: ಕಬ್ಬನ್ ಪಾರ್ಕ್ ಆವರಣದಲ್ಲಿ ನಡೆಸುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಸೂಚಿಸಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಈ ಕುರಿತು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ನ್ಯಾಯಾಲಯದ ಅನುಮತಿ ಪಡೆಯದೆ ಕಬ್ಬನ್ ಪಾರ್ಕ್ ಆವರಣದಲ್ಲಿ ನಿರ್ಮಿಸಿರುವ ಹಾಪ್ ಕಾಮ್ಸ್ ಭವನವನ್ನು ಸ್ವಾಧೀನಾನುಭವಕ್ಕೆ ತೆಗೆದುಕೊಳ್ಳಬಾರದು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರಿಗೆ ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: ಅಕ್ರಮ ಸಂಬಂಧ: ವಿಧವೆಯೊಂದಿಗೆ ಬೆತ್ತಲಾದ ಯುವಕ, ಬ್ಲ್ಯಾಕ್ ಮೇಲ್ಗೆ ಹೆದರಿ ಆತ್ಮಹತ್ಯೆ
ಪಾರಂಪರಿಕ ತಾಣವಾದ ಕಬ್ಬನ್ ಪಾರ್ಕ್‌ನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕೆಂದರೂ ಹೈಕೋರ್ಟ್‌ನಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ವಿಭಾಗೀಯ ಪೀಠ 2001ರಲ್ಲಿ ಆದೇಶಿಸಿತ್ತು. ಆದರೆ ಹೈಕೋರ್ಟ್‌ನಿಂದ ಅನುಮತಿ ಪಡೆಯದೆ ತೋಟಗಾರಿಕೆ ಇಲಾಖೆ ಹಾಪ್ ಕಾಮ್ಸ್ ಕಟ್ಟಡ ನಿರ್ಮಿಸಿದೆ. ಅಲ್ಲದೆ ರಾಜ್ಯ ಸರ್ಕಾರಿ ನೌಕರರ ಸಂಘವೂ ಕೂಡ ಕಟ್ಟಡವೊಂದನ್ನು ನಿರ್ಮಿಸುತ್ತಿದೆ. ಇದಲ್ಲದೆ ಸೆಂಚುರಿ ಕ್ಲಬ್, ಪ್ರೆಸ್ ಕ್ಲಬ್, ಕರ್ನಾಟಕ ನೌಕರರ ಸಂಘ, ಸಚಿವಾಲಯ ಕ್ಲಬ್ ಮತ್ತು ವೈಎಂಸಿಎ ಸೇರಿ ಹಲವು ಕ್ಲಬ್ ಹಾಗೂ ಸರ್ಕಾರಿ ಇಲಾಖೆಗಳು ಕಬ್ಬನ್ ಪಾರ್ಕ್‌ನಲ್ಲಿ ಅನಧಿಕೃತವಾಗಿ ಶಾಶ್ವತ ಕಟ್ಟಡ ನಿರ್ಮಿಸಿವೆ. ಈಗಲೂ ಕಟ್ಟಡಗಳನ್ನು ವಿಸ್ತರಿಸಿಕೊಂಡು ಹೋಗುತ್ತಿವೆ ಎಂದು ಅರ್ಜಿದಾರರು ದೂರಿದ್ದಾರೆ.