ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ಚರ್ಚೆ ನಡೆಯುವ ವೇಳೆ ಹಾಸನ ರಾಜಕೀಯ ಹಾಗೂ ಮಹಿಳಾ ಮೀಸಲಾತಿ ವಿಷಯ ಗಮನ ಸೆಳೆದವು.
ವಿಧಾನಸಭೆ ಕಲಾಪದಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ, ಸಂವಿಧಾನದ ಮಹತ್ವ, ಆಶಯದ ಕುರಿತು ಮಾತನಾಡುತ್ತಾ ಮಹಿಳಾ ಸಬಲೀಕರಣದ ವಿಷಯ ಪ್ರಸ್ತಾಪಿಸಿದರು. ಶೇ.49ರಷ್ಟು ಮಹಿಳೆಯರಿದ್ದಾರೆ. ಹಾಗಾಗಿ ಮಹಿಳಾ ಮೀಸಲಾತಿ ಕೊಡಬೇಕು ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಹಾಸನ ಜಿಲ್ಲಾ ಪಂಚಾಯತ್ನಲ್ಲಿ ಹೆಣ್ಣು ಮಗಳೊಬ್ಬಳು ಸಭೆ ಮಾಡೋಕೆ ಬಿಡ್ತಿಲ್ಲ. ನೀವು ನೋಡಿದ್ರೆ ಮಹಿಳಾ ಮೀಸಲಾತಿ ಬಗ್ಗೆ ಮಾತಾಡ್ತೀರಿ ಎಂದು ಕಾಲೆಳೆದರು.
ಮಾಧುಸ್ವಾಮಿ ಹೇಳಿಕೆ ತಳ್ಳಿಹಾಕಿದ ರೇವಣ್ಣ, ಅಯ್ಯೋ ನಮ್ಮದು ತಪ್ಪಲ್ಲ, ಅವರ ಪಕ್ಷದವರೇ ಸಭೆಗೆ ಹೋಗಿಲ್ಲ, ನಾವೇನ್ ಮಾಡೋದು ಎಂದರು. ಈ ವೇಳೆ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಮಧ್ಯಪ್ರವೇಶಿಸಿ, ಭಾರತದ ಸಂವಿಧಾನದ ಬಗ್ಗೆ ಮಾತನಾಡುವಾಗ ಹಾಸನದ ಪಂಚಾಯತ್ ಬಗ್ಗೆ ಮಾತಾಡ್ತಾರೆ. ಬೇಕಾದ್ರೆ ಹಾಸನದ ಪಂಚಾಯತ್ ಬಗ್ಗೆ ಮಾತಾಡೋದಕ್ಕೆ ಬೇರೆ ಟೈಮ್ ಕೊಡಿ ಅವರಿಗೆ ಎಂದು ಟಾಂಗ್ ಕೊಟ್ಟರು. ಇದಕ್ಕೆ ನಾನೇನು ಹಾಸನ ಪಾಲಿಟಿಕ್ಸ್ ಮಾಡೋದಕ್ಕೆ ಬಂದಿಲ್ಲ, ಮಹಿಳಾ ಮೀಸಲಾತಿ ಬಗ್ಗೆ ಮಾತಾಡಿದ್ದು ಎಂದು ರೇವಣ್ಣ ತಿರುಗೇಟು ನೀಡೂವ ಮೂಲಕ ಆ ಬಗೆಗಿನ ಚರ್ಚೆಗೆ ತೆರೆ ಎಳೆದರು.
ಇದಕ್ಕೂ ಮುನ್ನ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯೆ ಸೌಮ್ಯರೆಡ್ಡಿ, ಉತ್ತಮ ಸಂವಿಧಾನ ನಮ್ಮದಾಗಿದೆ. ಎಲ್ಲರಿಗೂ ಸಮಾನತೆಯನ್ನ ನಮ್ಮ ಸಂವಿಧಾನ ನೀಡಿದೆ. ಆದರೆ, ಇದೇ ಸದನದಲ್ಲಿರುವ ಸದಸ್ಯರು ಹಾಗೂ ಸಂಸದರು ಅಲ್ಪಸಂಖ್ಯಾತರ ಬಗ್ಗೆ ಎಂತೆಂಥ ಹೇಳಿಕೆ ನೀಡಿದರು ಅಂತಾ ಗೊತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯೂ ಮಾತನಾಡಿದ್ದಾಗಿದೆ. ಹೀಗಾದ್ರೆ ಹೇಗೆ?, ಇದೀಗ ಟೌನ್ ಹಾಲ್ ಮುಂದೆ ಪ್ರತಿಭಟನೆಗೂ ಅವಕಾಶ ಇಲ್ಲ. ಹಾಗಾದ್ರೆ, ಎಲ್ಲಿ ಪ್ರತಿಭಟನೆ ಮಾಡಬೇಕು ಎಂದು ಪ್ರಶ್ನಿಸಿದರು. ಸಂವಿಧಾನ ಬದ್ದ ಹಕ್ಕುಗಳು ಮೊಟಕುಗೊಳಿಸುವುದು ಸರಿಯಲ್ಲ. ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ಕಲಾಪದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ ಬಿಜೆಪಿ ಶಾಸಕ:
ಸಿದ್ದರಾಮಯ್ಯ ಒಳ್ಳೆಯ ಕಾರ್ಯಕ್ರಮ ತಂದಿದ್ದಾರೆ ಎಂದು ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಹೊಗಳಿದ ಘಟನೆ ಕಲಾಪದಲ್ಲಿ ನಡೆಯಿತು. ಸಿದ್ದರಾಮಯ್ಯನವರು ಸರ್ಕಾರಿ ಕಾಮಗಾರಿಗಳ ಟೆಂಡರ್ನಲ್ಲೂ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡಲು ದೇಶದಲ್ಲಿ ಮೊದಲ ಬಾರಿಗೆ ಹೊಸ ಕಾನೂನು ಜಾರಿಗೆ ತಂದಿದಾರೆ. ಸಿದ್ದರಾಮಯ್ಯ ತಂದ ಈ ಕಾರ್ಯಕ್ರಮದಿಂದ ನಮ್ಮ ಸಮಯದಾಯಗಳ ಬಹಳಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ ಎಂದರು. ಸಂವಿಧಾನದ ಮೇಲಿನ ಚರ್ಚೆ ನಂತರ ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 11ಗಂಟೆಗೆ ಮುಂದೂಡಿಕೆ ಮಾಡಲಾಯಿತು.