ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದ (Karnataka bitcoin scam) ಕಿಂಗ್ ಪಿನ್ ಶ್ರೀಕಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ. ಅಲ್ಲದೆ, ಶ್ರಿಕೃಷ್ಣ ಅಪಾಯದಲ್ಲಿದ್ದಾನೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪ, ಶ್ರೀಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.
ಬೆಂಗಳೂರು ಪೊಲೀಸರು ಸಹ ಶ್ರೀಕಿಗೆ (hacker Shreeki) ನಾಲ್ಕು ದಿನಗಳಿಂದ ಭದ್ರತೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಇದುವರೆಗೂ ಶ್ರೀಕಿ ಪೊಲೀಸರಿಗೆ ಕೈಗೆ ಸಿಕ್ಕಿಲ್ಲ. ಹೀಗಾಗಿ ಕಾಣದ ಕೈಗಳಿಗೇನಾದರೂ ಶ್ರೀಕಿ ಸಿಕ್ಕಿ ಬಿದ್ದಿದ್ದಾನಾ ಎಂಬ ಅನುಮಾನ ಶುರುವಾಗಿದೆ. ಅಲ್ಲದೆ ಶ್ರೀಕಿ ಬಿಟ್ ಕಾಯಿನ್ ವಿಷಯಕ್ಕೆ ಸಂಬಂಧಿಸಿ ಈ ಹಿಂದೆ ಶ್ರೀಕಿ ಮೇಲೆ ಹಲ್ಲೆ ನಡೆದಿತ್ತು. ಜೊತೆಗೆ ಕಾಟನ್ ಪೇಟೆ ಕೇಸ್ನಲ್ಲಿ ಒಂದರಲ್ಲಿ ಎರಡನೇ ಆರೋಪಿಯಾಗಿರುವ ರಾಬಿನ್ ಖಂಡೇಲ್ ವಾಲಾ ಜೊತೆ ಶ್ರೀಕಿ ಬಿಟ್ ಕಾಯಿನ್ ವ್ಯವಹಾರ ನಡೆಸಿದ್ದ. ಹೀಗಾಗಿ ಸದ್ಯ ಶ್ರೀಕಿ ಎಲ್ಲಿದ್ದಾನೆ (hacker Shreeki missing) ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಐಪಿಎಸ್ ಆಡಿಯೋ ವೈರಲ್ : ಇನ್ನೊಂದು ಕಡೆ ಬಿಟ್ ಕಾಯಿನ್ ಪ್ರಕರಣ ಸಂಬಂಧ ವೈರಲ್ ಆಗಿದ್ದ ಆಡಿಯೋ ಹಿಂದೆ ಮಹಿಳಾ ಐಪಿಎಸ್ ಅಧಿಕಾರಿ ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಐಡಿ ಪೊಲೀಸರು ತನಿಖೆ ಮಾಡಿದ್ದು, ಇದು ನಿವೃತ್ತ ಸಬ್ ಇನ್ಸ್ಪೆಕ್ಟರ್ ಒಬ್ಬರು ಹೆಡ್ ಕಾನ್ಸಟೇಬಲ್ ಜೊತೆ ಮಾತಾಡಿರುವ ಆಡಿಯೋ ಎಂದು ಗೊತ್ತಾಗಿದೆ. ಆದರೆ ಸಬ್ ಇನ್ಸಪೆಕ್ಟರ್ಗೆ ಮೊದಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಕಾಲ್ ಮಾಡಿದ್ದರು. ನಂತರ ಸಬ್ ಇನ್ಸ್ಪೆಕ್ಟರ್ ಹೆಡ್ ಕಾನ್ ಸ್ಟೇಬಲ್ಗೆ ಕಾನ್ಫರೆನ್ಸ್ ಕರೆ ಹಾಕಿದ್ದಾಗಿ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಸಿಐಡಿಯಿಂದ ಡಿಜಿ, ಐಜಿಪಿಗೆ ಅಂತರಿಕ ವರದಿ ಸಲ್ಲಿಕೆಯಾಗಿದೆ.
ಜೊತೆಗೆ ಶ್ರೀಕೃಷ್ಣ ಕೇವಲ ಬಿಟ್ ಕಾಯಿನ್ ವೆಬ್ ಸೈಟ್ಗಳಲ್ಲದೆ ಜೊಮ್ಯಾಟೊ ವೆಬ್ ಸೈಟ್, ಕೆಲವೊಂದು ಹಣಕಾಸು ವ್ಯವಹಾರದ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿದ್ದ ಎನ್ನಲಾಗ್ತಿದೆ. ರಾಬಿನ್ ಖಂಡೇಲ್ ವಾಲಾ ಬಳಿ ವಶಪಡಿಸಿಕೊಂಡಿರುವ ಆರು ಹಾರ್ಡ್ ಡಿಸ್ಕ್ಗಳ ಪೈಕಿ ಒಂದನ್ನ ವಿಶ್ಲೇಷಣೆ ಮಾಡಲಾಗಿದ್ದು, ಇದರಲ್ಲಿ ಈ ವಿಚಾರಗಳು ಹೊರ ಬಿದ್ದಿವೆ.
ಪೊಲೀಸ್ ವ್ಯಾಲೆಟ್ನಲ್ಲಿ ಬಿಟ್ ಕಾಯಿನ್ ಭದ್ರ: 0.08 ಬಿಟ್ ಕಾಯಿನ್ ಪೊಲೀಸ್ ವ್ಯಾಲೆಟ್ನಲ್ಲಿ ಭದ್ರವಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ. ಆರೋಪಿ ರಾಬಿನ್ ಖಂಡೇಲ್ ವಾಲಾ ನ ಅಕೌಂಟ್ ನಿಂದ ಜಪ್ತಿಮಾಡಿದ ಉಳಿದ ಮೂರು ರೀತಿಯ ಕ್ರಿಪ್ಟೋ ಕರೆನ್ಸಿಗಳ ಜೊತೆಯಲ್ಲಿದೆ. ನ್ಯಾಯಾಲಯದ ಸಮಕ್ಷಮದಲ್ಲಿ ಜೋಪಾನವಾಗಿ ಪೊಲೀಸ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. 2.50 ಲಕ್ಷ ಮೌಲ್ಯದ ಬಿಟ್ ಕಾಯಿನ್ ಪೊಲೀಸ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟು ಮೂರು ವಿಧದ ಕ್ರಿಪ್ಟೋ ಕರೆನ್ಸಿಯನ್ನ ನ್ಯಾಯಾಲಯದ ಸಮಕ್ಷಮದಲ್ಲಿ ಜಪ್ತಿ ಮಾಡಲಾಗಿದೆ. ಯುನೋಕಾಯಿನ್ ಎಂಬುದು ಕ್ರಿಫ್ಟೋ ಕರೆನ್ಸಿಯಲ್ಲ. ಯುನೋಕಾಯಿನ್ ಒಂದು ಬಿಟ್ ಕಾಯಿನ್ ಎಕ್ಸ್‌ಚೇಂಜ್ ಕಂಪನಿಯಾಗಿದೆ. ಪ್ರಕರಣದ ತನಿಖೆಯಲ್ಲಿ ಯುನೋಕಾಯಿನ್ ಕಂಪನಿಯವರ ಸಲಹೆ ಪಡೆಯಲಿದ್ದೇವೆ. ಸಣ್ಣ ಪ್ರಮಾಣದ ಹಣಕ್ಕಾಗಿ ಯುನೋಕಾಯಿನ್ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ. ಪ್ರಕರಣದಲ್ಲಿ ಯುನೋಕಾಯಿನ್ ಅಪರಾಧಿಯಲ್ಲ ಅದೊಂದು ಸಂತ್ರಸ್ತ ಕಂಪನಿಯಾಗಿದೆ.