ಬೆಂಗಳೂರು : ಸಮಾನ ಮನಸ್ಕರೆಲ್ಲರೂ ಸೇರಿ ಅನಿಲ್ ಕುಮಾರ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸುವ ನಿರ್ಧಾರ ಮಾಡಿದ್ದು ನಾವು ಸಹ ಬೆಂಬಲ ಕೊಟ್ಟಿದ್ದೇವೆ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಹೆಚ್. ಡಿ. ರೇವಣ್ಣ, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಸಮಾನಮನಸ್ಕರು ಎಲ್ಲರೂ ಸೇರಿ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್ ಕುಮಾರ್ರನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಕೈ, ತೆನೆ ಬೆಂಬಲಿತ ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಎಲ್ಲರ ವಿಶ್ವಾಸ ಪಡೆಯುತ್ತೇನೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಜೆಡಿಎಸ್ ಮುಖಂಡರ ಬೆಂಬಲವೂ ಇದೆ. ಎಲ್ಲರ ವಿಶ್ವಾಸ ಗಳಿಸಿ ಮತ ಕೇಳುತ್ತೇನೆ. ನನಗೆ ಗೆಲ್ಲುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.