ಬೆಂಗಳೂರು: ಪಠ್ಯ ಪರಿಷ್ಕರಣೆ ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಜೊತೆ ಚರ್ಚಿಸಿ ಏನೆಲ್ಲಾ ಬದಲಾವಣೆ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಿಂದ ವಾಪಸಾದ ಬಳಿಕ ಆರ್.ಟಿ. ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನಮಗೆಲ್ಲರಿಗೂ ಹಿರಿಯರು, ಅವರು ಪಠ್ಯ ಕ್ರಮದ ಬಗ್ಗೆ ಪತ್ರ ಬರೆದಿದ್ದಾರೆ. ನಾನು ನಾಳೆ ಶಿಕ್ಷಣ ಇಲಾಖೆ ಮುಖ್ಯಸ್ಥರ ಜತೆ ಚರ್ಚಿಸುತ್ತೇನೆ. ದೇವೇಗೌಡರು ಬರೆದಿರುವ ಪತ್ರದ ಸಾರವನ್ನು ಸಂಪೂರ್ಣವಾಗಿ ಅವಲೋಕಿಸುತ್ತೇವೆ. ಅವರು ಏನೆಲ್ಲ ಸಲಹೆ ಕೊಟ್ಟಿದ್ದಾರೋ ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅವರಿಗೆ ಉತ್ತರವನ್ನು ಗೌರವಪೂರ್ವಕವಾಗಿ ಬರೆಯುತ್ತೇನೆ ಎಂದರು.
ರಾಜಕೀಯಕ್ಕಾಗಿ ಮೋದಿ ವಿರುದ್ಧ ಸಿದ್ದರಾಮಯ್ಯ ಆರೋಪ: ಜನಕ್ಕೆ ದ್ರೋಹವೆಸಗಿ ಯೋಗ ಮಾಡಲು ರಾಜ್ಯಕ್ಕೆ ಮೋದಿ ಬಂದಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಕಿಡಿಕಾರಿದರು. ಕೋವಿಡ್ ಸಂದರ್ಭದಲ್ಲಿ ಮೋದಿ ಅವರ ಆಡಳಿತದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಲಸಿಕೆ ಮತ್ತು ಆರೋಗ್ಯ ಉಪಕರಣಗಳ ಉತ್ಪಾದನೆ ಬಗ್ಗೆ ಹಾಗೇ ಇತರ ರಾಷ್ಟ್ರಗಳಿಗೆ ನಮ್ಮ ದೇಶ ನೆರವಾಗಿದ ಬಗ್ಗೆ ಜನತೆಗೆ ತಿಳಿದಿದೆ. ರಾಜಕೀಯವಾಗಿ ಮಾತಾಡಬೇಕು ಎಂದು ಮಾತಾಡಿದರೆ ಅದಕ್ಕೆ ಅರ್ಥ ಇರಲ್ಲ, ಜನರಿಗೆ ಎಲ್ಲವೂ ನೆನಪು ಇರುತ್ತದೆ ಎಂದು ಸಿದ್ದರಾಮಯ್ಯಗೆ ಸಿಎಂ ತಿರುಗೇಟು ನೀಡಿದರು.
ಆಡಳಿತಕ್ಕೆ ಮೋದಿ ಮೆಚ್ಚುಗೆ ದೊಡ್ಡ ಶಕ್ತಿ ಸಿಕ್ಕಂತಾಯ್ತು: ಬೊಮ್ಮಾಯಿ ಆಡಳಿತಕ್ಕೆ ಮೋದಿ ಮೆಚ್ಚುಗೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಮೋದಿಯವರು ಯಾವಾಗಲೂ ಸುಶಾಸನ, ಅಭಿವೃದ್ಧಿ ಪರ ಆಡಳಿತ ಮೆಚ್ಚಿಕೊಂಡವರು. ರಾಜ್ಯದಲ್ಲೂ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಜಾರಿ ಆಗಿದೆ. ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಹಣ ನೀಡಿ ಅವರ ಸಹಭಾಗಿತ್ವದಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿರುವುದನ್ನು ಅವರು ನೋಡಿದ್ದಾರೆ. ಮೋದಿಯವರ ಮೆಚ್ಚುಗೆ ನನಗೆ ದೊಡ್ಡ ಶಕ್ತಿ ನೀಡಿದೆ. ನಾನು ಇನ್ನಷ್ಟು ಬದ್ಧತೆಯಿಂದ, ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಲು ಅವರ ಮೆಚ್ಚುಗೆ ಪುಷ್ಟಿ ಕೊಟ್ಟಿದೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬಗ್ಗೆ ನಾಳೆ ಸ್ವಾಮೀಜಿಗಳ ಸಭೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅದರ ಬಗ್ಗೆ ಸಮುದಾಯವರು ಮತ್ತು ಸಿ.ಸಿ. ಪಾಟೀಲ್ ಅವರು ಸ್ವಾಮೀಜಿಗಳ ಜತೆ ಮಾತನಾಡಲಿದ್ದಾರೆ ಎಂದರು.
ಇದನ್ನೂ ಓದಿ: ಸೈನ್ಯಕ್ಕೆ ಸೇರುವವರು ರೈಲು, ಬಸ್ಗಳಿಗೆ ಬೆಂಕಿ ಹಚ್ಚುತ್ತಾರಾ?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ