ಬೆಂಗಳೂರು: ನಿತ್ಯ ರಾಜಭವನ ರಸ್ತೆಯಲ್ಲೇ ಓಡಾಡುವಾಗ ಒಮ್ಮೆಯಾದರೂ ರಾಜಭವನದ ಒಳಪ್ರವೇಶ ಮಾಡಬೇಕು ಅಂತಾ ಅದೆಷ್ಟು ಜನರು ಮನಸ್ಸಿನಲ್ಲೇ ಅಂದುಕೊಂಡಿರುತ್ತಾರೆ. ಆದರೆ, ಇದೀಗ ಆಸೆ ಈಡೇರುವ ಸಮಯ ಬಂದಿದ್ದು, ರಾಜ್ಯಪಾಲ ವಾಜೂಭಾಯಿ ವಾಲಾ ಅವರು ಒಂದು ಅವಕಾಶ ಮಾಡಿ ಕೊಟ್ಟಿದ್ದಾರೆ.
ಕಳೆದ ವರ್ಷದ ಸ್ವಾತಂತ್ರ್ಯೋತ್ಸವದಂದು ರಾಜಭವನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಈಗ ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದು, 73ನೇ ಸ್ವಾತಂತ್ರೋತ್ಸವ ಹಿನ್ನೆಲೆ ಮತ್ತೊಮ್ಮೆ ರಾಜಭವನ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಿನ್ನೆಯಿಂದ ಶುರುವಾಗಿದ್ದು ಅಗಸ್ಟ್ 31 ರವರೆಗೂ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
ಇಂದು ಭಾನುವಾರವಾದ ಕಾರಣ ಬೆಂಗಳೂರು ಮಾತ್ರವಲ್ಲದೇ ನಾನಾ ಭಾಗಗಳಿಂದ ಜನರು ಕುಟುಂಬ ಸಮೇತರಾಗಿ ಬಂದಿದ್ದ ದೃಶ್ಯ ಕಂಡು ಬಂತು. ರಾಜಭವನದ ಮುಂಭಾಗ ಸಾರ್ವಜನಿಕರಿಗೆ ಸ್ವಾಗತ ಕೋರುವ ಬೋರ್ಡ್‌ಗಳನ್ನು ಸಹ ಹಾಕಲಾಗಿದೆ.
ರಾಜಭವನಕ್ಕೆ ಪ್ರವೇಶ ಉಚಿತವಾಗಿದ್ದು, ಭೇಟಿ ನೀಡುವ ಆಸಕ್ತರು ಮೊದಲು ಆನ್‌ಲೈನ್ ಮೂಲಕ ತಮ್ಮ ಹೆಸರು, ಆಧಾರ್ ಸಂಖ್ಯೆ (ಯಾವುದಾದರೂ ಗುರುತಿನ ಚೀಟಿ), ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸವನ್ನು ರಾಜಭವನದ ವೆಬ್‌ಸೈಟ್ www.rajbhavan.kar.nic.in ಮೂಲಕ ನೋಂದಾಯಿಸಿಕೊಳ್ಳಬಹುದು. ಒಂದು ವೇಳೆ ಆನ್ಲೈನ್ನಲ್ಲಿ ನೋಂದಣಿ ಆಗದಿದ್ದರೆ ನೇರವಾಗಿ ಆಧಾರ್ ಕಾರ್ಡ್ ಸಹಿತ ಹೋಗಬಹುದು.
ಭೇಟಿ ಸಮಯ; ಮಧ್ಯಾಹ್ನ 3-30 ರಿಂದ ಸಂಜೆ 7 ರವರೆಗೆ ನಿಗಧಿ ಮಾಡಲಾಗಿದೆ.
ರಾಜಭವನ ಒಳಗೆ ಏನೆಲ್ಲ ಇದೆ ಗೊತ್ತಾ?
ರಾಜಭವನ ಗೇಟಿನ ಒಳಗೆ ಹೋಗುತ್ತಿದ್ದಂತೆ ಎಡಭಾಗದಲ್ಲಿ ಗಾಜಿನ ಮನೆಯನ್ನು ನೋಡಬಹುದು. ಗಾಜಿನ ಮನೆಯಲ್ಲಿ ಕೂತು ಟೀ-ಕಾಫಿ ಕುಡಿಯುತ್ತಾ ಸಂಗೀತ ಸುಧೆ ಅಲಿಸಬಹುದು. ನಂತರ ಅಲ್ಲಿಂದ ಬೋಟಾನಿಕಲ್ ಗಾರ್ಡನ್, ಭೂ ದೇವಿ ದೇವಸ್ಥಾನ, 80 ವರ್ಷದ ಪೀಪಲ್ ಟ್ರೀ, ರುದ್ರಾಕ್ಷಿ ಮರ, 100 ವರ್ಷದ ಹಳೆಯದಾದ ಶ್ರೀಗಂಧ ಮರವನ್ನ ನೋಡಬಹುದು. ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕೂಡಿರುವ ಕಾರಂಜಿ, ಬಟರ್ ಫ್ಲೈ ಗಾರ್ಡನ್ನ ನೋಡಬಹುದು.
ಇನ್ನು ಪಾರ್ಟಿ ಹಾಲ್, ವಿಐಪಿ ಮಿಟಿಂಗ್ ಹಾಲ್‌ನ ವೀಕ್ಷಣೆ ಮಾಡಬಹುದು. ಬ್ಯಾಂಕ್ವೆಟ್ ಹಾಲ್‌ನಲ್ಲಿ 8 ನಿಮಿಷದ 30 ಸೆಕೆಂಡ್ಗಳ ವಿಡಿಯೋ ಒಂದನ್ನ ಪ್ರಸಾರ ಮಾಡಲಾಗುತ್ತೆ. ಅದರಲ್ಲಿ 16 ಎಕರೆಯ ರಾಜಭವನದ ವೈಭವದ ದೃಶ್ಯ ಪ್ರಸಾರ ಮಾಡಲಾಗುತ್ತೆ. ಆ ವಿಡಿಯೋದಲ್ಲಿ ರಾಜ್ಯಪಾಲ ವಾಜೂಭಾಯಿ ವಾಲಾ ಅವರು ಸಾರ್ವಜನಿಕರನ್ನು ಸ್ವಾಗತಿಸುವುದು ಒಳಗೊಂಡಿದೆ. ರಾಜಭವನದಲ್ಲಿ ಈಜುಕೊಳ, ಟೆನ್ನಿಸ್ ಕೋಟ್, 19 ಬೆಡ್ ರೂಂ, ಲೈಬ್ರರಿ, ಕಾನ್ಫರೆನ್ಸ್ ರೂಂ, ಡೈನಿಂಗ್ ಹಾಲ್ ಜೊತೆಗೆ ರಾಜ್ಯಪಾಲರ ಕೋಣೆ ಒಳಗೊಂಡಿರುವ ವಿಡಿಯೋ ಪ್ರದರ್ಶನ ಮಾಡಲಾಗುತ್ತೆ.
ಕಳೆದ ವರ್ಷ 37 ಸಾವಿರ ಜನರು ರಾಜಭವನ ವೀಕ್ಷಣೆಯನ್ನು ಮಾಡಿದ್ರು. ಈ ಬಾರಿಯೂ ಅದರ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಸುಮಾರು ಒಂದು ಗಂಟೆಗಳ ಕಾಲ ರಾಜಭವನದ ವೈಭವವನ್ನು ನೋಡಬಹುದು. ಆದರೆ, ಅಲ್ಲಿ ಮೊಬೈಲ್, ಕ್ಯಾಮೆರಾ ಎಲ್ಲವನ್ನೂ ನಿಷೇಧ ಮಾಡಲಾಗಿದೆ. ಕೇವಲ ನಿಮ್ಮ ಕಣ್ಣು ಎಂಬ ಕ್ಯಾಮರಾದಲ್ಲೇ ಎಲ್ಲವನ್ನೂ ಸೆರೆಹಿಡಿದುಕೊಳ್ಳಬೇಕಾಗಿದೆ. ರಾಜಭವನದ ನೆನಪಿಗಾಗಿ, ಒಳಗೆಯೇ ಫೋಟೋಗ್ರಾಫರ್ ಇದ್ದು, ಅವರೇ ಭವನದ ಎದುರು ನಿಲ್ಲಿಸಿ ಫೋಟೋವನ್ನ ಕಿಕ್ಲಿಸಿ ಇ-ಮೇಲ್ ಮಾಡುತ್ತಾರೆ.