ಬೆಂಗಳೂರು: ಮದ್ಯಮುಕ್ತ ಕರ್ನಾಟಕ ಸತ್ಯಾಗ್ರಹಕ್ಕೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
6 ತಿಂಗಳ ಹಿಂದೆ ಪಾದಯಾತ್ರೆಗೆ ಬಂದಿದ್ದಾಗಲೂ ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ನಮ್ಮನ್ನು ವಿಚಾರಿಸಿರಲಿಲ್ಲ. ಇದೀಗ ಯಡಿಯೂರಪ್ಪನವರ ಭೇಟಿಗೆ ಮನವಿ ಮಾಡಲು ಅವಕಾಶ ಕೇಳಿದ್ದೇವೆ, ಆದ್ರೆ ಸಿಕ್ಕಿಲ್ಲ. ಪೊಲೀಸರಿಂದಲೂ ಸಹಕಾರವಿಲ್ಲ. ಸತ್ಯಾಗ್ರಹ ಮಾಡಲು ಅವಕಾಶ ಕೊಡಿ, ಇಲ್ಲ ಅಂದ್ರೆ ನಾವು ಬಂಧನವಾಗಲೂ ಸಿದ್ಧ ಎಂದು ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ರು.
ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ಸಿಗದ ಹಿನ್ನಲೆ ಸಿಎಂ ಭೇಟಿಯಾಗಲು ನೂರು ಜನರ ನಿಯೋಗವಷ್ಟೇ ಬಂದಿದೆ. ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಮದ್ಯವನ್ನು ಪೂರ್ಣ ಪ್ರತಿಬಂಧಕ ಮಾಡ್ತೀನಿ ಎಂದು ಚಿತ್ರದುರ್ಗದಲ್ಲಿ ಹೇಳಿದ್ದಾರೆ. ಅವರಿಗೆ ಬೆಂಬಲ ಸೂಚಿಸಲು ನಾವು ಬಂದಿದ್ದೇವೆ. ರಾಜ್ಯದಲ್ಲಿ ಪೂರ್ಣ ಪ್ರತಿಬಂಧಕ ಕಾಯ್ದೆ ತಂದರೆ, ಅಬಕಾರಿ ಸುಂಕದ ಪಾಲಿನ ನಷ್ಟವನ್ನು ಮೂರು ವರ್ಷಗಳ ಕಾಲ ಕೇಂದ್ರ ಸರ್ಕಾರ ಅರ್ಧ ಭಾಗ ಕೊಡುವುದಾಗಿ ಹೇಳಿದೆ. ಹಾಗಾಗಿ ಸರ್ಕಾರ ಮದ್ಯ ನಿಷೇಧ ಮಾಡಲೇಬೇಕು ಎಂದು ಒತ್ತಾಯಿಸಿದರು.
ಸಿಎಂ ಭೇಟಿಯಾಗದ ಹೊರತು ಸ್ಥಳ ಬಿಟ್ಟು ಕದಲುವುದಿಲ್ಲ. ತಮ್ಮ ಊರುಗಳಿಗೆ ವಾಪಾಸ್ ಹೋಗುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.