ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಮಾಸಿಕ ಸಂಭಾವನೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆ ಕೇಂದ್ರಗಳಲ್ಲಿ ಕಾಯಂ ಸೇವೆಗೆ ನೇಮಕವಾಗುವ ಸ್ನಾತಕೋತ್ತರ ಡಿಪ್ಲೋಮಾ ಪದವೀಧರರಿಗೆ ಹಾಗೂ ಸೂಪರ್ ಸ್ಪೆಷಾಲಿಟಿ ಪದವೀಧರರಿಗೆ ಕ್ರಮವಾಗಿ 45,000 ರೂ. ಮತ್ತು 55,000 ರೂ. ಮಾಸಿಕ ಸಂಭಾವನೆ ನಿಗದಿಪಡಿಸಲಾಗಿರುತ್ತದೆ.
![ಸರ್ಕಾರದ ಆದೇಶ ಪ್ರತಿ](https://etvbharatimages.akamaized.net/etvbharat/prod-images/kn-bng-07-government-order-script-7208083_06052021234826_0605f_1620325106_1051.jpg)
ಕರ್ನಾಟಕ ಹೈಕೋರ್ಟ್ನಲ್ಲಿ ದಾಖಲಿಸಿರುವ ರಿಟ್ ಅರ್ಜಿ ಸಂಖ್ಯೆ 12427/2020ರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 2020, ಡಿಸೆಂಬರ್ 16 ರಂದು ನೀಡಿರುವ ತೀರ್ಪಿನಂತೆ ಇಲಾಖೆಯಲ್ಲಿ ಒಂದು ವರ್ಷ ಕಡ್ಡಾಯ ಸೇವೆಯನ್ನು ಸಲ್ಲಿಸುವ ವೈದ್ಯರಿಗೆ ಶಿಷ್ಯ ವೇತನ/ಮಾಸಿಕ ಸಂಭಾವನೆಯನ್ನು 6 ವಾರದೊಳಗೆ ನಿಗದಿಪಡಿಸುವಂತೆ ಸೂಚಿಸಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಇಲಾಖೆಯ ಪ್ರಸ್ತಾವನೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದಂತೆ ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸಿರುವ ಸೀನಿಯರ್ ರೆಸಿಡೆಂಟ್ ಮಾಸಿಕ ಶಿಷ್ಯ ವೇತನ 60,000 ರೂ. ನಿಗದಿಪಡಿಸಲಾಗಿರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ನಿಗದಿಪಡಿಸಿರುವ ಮಾಸಿಕ ಸಂಭಾವನೆಯಲ್ಲಿ ತಾರತಮವಿರುತ್ತದೆ. ಆದ್ದರಿಂದ ವೈದ್ಯಕೀಯ ವ್ಯಾಸಂಗವನ್ನು ಪೂರ್ಣಗೊಳಿಸಿ ಕಡ್ಡಾಯ ಸರ್ಕಾರಿ ಸೇವೆಗೆ ಒಳಪಡುವ ವೈದ್ಯರಿಗೆ ಈ ಕೆಳಕಂಡಂತೆ ಮಾಸಿಕ ಸಂಭಾವನೆಯನ್ನು ನಿಗದಿಪಡಿಸಲು ಶಿಫಾರಸಿನೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ವಿದ್ಯಾರ್ಹತೆ : (ಮಾಸಿಕ ಸಂಭಾವನೆ)
ಎಂಬಿಬಿಎಸ್ - 62666 ರೂ.
ಸ್ನಾತಕೋತ್ತರ ಪದವಿ/ಡಿಪ್ಲೋಮಾ- 67615 ರೂ.
ಸೂಪರ್ ಸ್ಪೆಷಾಲಿಟಿ- 72802 ರೂ.
ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಇಂದು ಈ ಕೆಳಕಂಡಂತೆ ಆದೇಶಿಸಿದ್ದಾರೆ.
![ಸರ್ಕಾರದ ಆದೇಶ ಪ್ರತಿ](https://etvbharatimages.akamaized.net/etvbharat/prod-images/kn-bng-07-government-order-script-7208083_06052021234826_0605f_1620325106_878.jpg)
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳ ಮಾಸಿಕ ಸಂಭಾವನೆಯನ್ನು ದಿನಾಂಕ 31.03.2021ರವರೆಗೆ ಎಂಬಿಬಿಎಸ್ ಪಧವೀದರರಿಗೆ ಸಂಬಂಧಿಸಿದಂತೆ 62,666 ರೂ. ನಿಗದಿಪಡಿಸಿದೆ.
ಸ್ನಾತಕೋತ್ತರ ಪದವಿ/ಡಿಪ್ಲೊಮಾದವರಿಗೆ 67,615 ರೂ. ನಿಗದಿಯಾಗಿತ್ತು. ಆದರೆ, ಏಪ್ರಿಲ್ 1 ರಿಂದ ಅನ್ವಯವಾಗುವಂತೆ 70,000 ರೂ.ಗೆ ಏರಿಸಿ ಹಾಗೂ ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜನಗೊಳ್ಳುವ ಅಭ್ಯರ್ಥಿಗಳಿಗೆ ವಾರ್ಷಿಕ 10 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.