ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಅವರು ಯಶವಂತಪುರದ ಎಪಿಎಂಸಿ ಯಾರ್ಡ್ ಗೇಟ್ ನಂ.1ರಲ್ಲಿ ಸ್ಥಾಪಿಸಿರುವ ಸೋಂಕು ನಿವಾರಕ ಸುರಂಗವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ನಾನಾ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ರೈತರು,ಲಾರಿ ಚಾಲಕರು, ಕ್ಲೀನರ್‌ಗಳು ಮತ್ತು ಎಪಿಎಂಸಿ ಯಾರ್ಡ್‌ನಲ್ಲಿ ಕಾರ್ಯ ನಿರ್ವಹಿಸುವ ವರ್ತಕರು ಓಡಾಡುತ್ತಿರುತ್ತಾರೆ. ಹಾಗಾಗಿ ಇಲ್ಲಿ ಕೊರೊನಾ ವೈರಸ್ ಹರಡುವ ಸಾದ್ಯತೆ ಹೆಚ್ಚಾಗಿದ್ದು, ಅದನ್ನು ತಡೆಯಲು ಸೋಂಕು ನಿವಾರಕ ಸುರಂಗ ಸ್ಥಾಪಿಸಲಾಗಿದೆ. ಸದಾಸ್ಮಿತ ಫೌಂಡೇಷನ್ ವತಿಯಿಂದ ಕೇಂದ್ರ ಸಚಿವ ಸದಾನಂದಗೌಡ ಹಾಗೂ ಸದಾಸ್ಮಿತ ಫೌಂಡೇಷನ್ ಅಧ್ಯಕ್ಷರು, ಪದಾಧಿಕಾರಿಗಳು ಸೋಂಕು ನಿವಾರಕ ಸುರಂಗ ಸ್ಥಾಪಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ಇದು ತುಂಬಾ ಒಳ್ಳೆಯ ವ್ಯವಸ್ಥೆಯಾಗಿದೆ, ಇದೊಂದೇ ಯಂತ್ರ ಸಾಲೋದಿಲ್ಲ. ಇನ್ನೂ ಎರಡ್ಮೂರು ಎಪಿಎಂಸಿ ಯಾರ್ಡ್‌ಗೆ ಈ ಯಂತ್ರಗಳ ಅವಶ್ಯಕತೆಯಿದೆ. ಹಾಗಾಗಿ ಕೇಂದ್ರ ಸಚಿವರು, ಫೌಂಡೇಶನ್ ನಿರ್ದೇಶಕರ ಜೊತೆ ಮಾತನಾಡಿ ಅಳವಡಿಸುವಂತ ಪ್ರಯತ್ನ ಮಾಡುತ್ತೇನೆ ಎಂದರು. ಎಪಿಎಂಸಿಗೆ ಬರುವ ಲಾರಿ ಚಾಲಕರು, ಕ್ಲೀನರ್, ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು. ಜೊತೆಗೆ ಕೊರೊನಾ ಮಹಾಮಾರಿ ಹರಡದಂತೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಸಚಿವ ಗೋಪಾಲಯ್ಯ ಅವರು, ನಂದಿನಿ ಲೇಔಟ್‌ನಲ್ಲಿ ವಾಸವಾಗಿರುವ ಬಡವರಿಗೆ ಉಚಿತ ಆಹಾರದ ಕಿಟ್ ಹಾಗೂ ಮಾಸ್ಕ್‌ಗಳನ್ನು ವಿತರಣೆ ಮಾಡಿದ್ರು.