ಬೆಂಗಳೂರು: ವಿವಿಧ ರೀತಿಯ ಆಭರಣಗಳನ್ನು ಡಿಸೈನ್ ಮಾಡಿಕೊಡುವುದಾಗಿ ನಂಬಿಸಿ ಚಿನ್ನಾಭರಣ ಅಂಗಡಿ (ಜ್ಯುವೆಲ್ಲರಿ ಶಾಪ್) ಮಾಲೀಕರಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನದ ಗಟ್ಟಿ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂರು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
![Bangalore](https://etvbharatimages.akamaized.net/etvbharat/prod-images/14046227_557_14046227_1640828790183.png)
ಪಶ್ಚಿಮ ಬಂಗಾಳ ಮೂಲದ ಸುನೀಲ್ ಕುಮಾರ್ ಬಂಧಿತ ಆರೋಪಿ. ಈತ ಕಳೆದ 25 ವರ್ಷಗಳಿಂದ ನಗರದ ಸಂಪಂಗಿರಾಮನಗರದಲ್ಲಿ ವಾಸವಾಗಿದ್ದ. ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ ಆರೋಪಿ ನಗರದ ವಿವಿಧ ಜ್ಯುವೆಲ್ಲರಿ ಶಾಪ್ಗಳಲ್ಲಿ ಚಿನ್ನದ ಗಟ್ಟಿ ಪಡೆದು ವಿವಿಧ ಮಾದರಿಯ ಚಿನ್ನಾಭರಣಗಳನ್ನು ಮಾಡಿಕೊಡುತ್ತಿದ್ದ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿದುದರಿಂದ ಈತ ಮಾಲೀಕರ ವಿಶ್ವಾಸಗಳಿಸಿಕೊಂಡಿದ್ದ.
ಇದೇ ವಿಶ್ವಾಸದ ಮೇರೆಗೆ ಚಿನ್ನಾಭರಣ ಅಂಗಡಿ ಮಾಲೀಕ ರಾಕೇಶ್ ಬೆಳ್ಳೂರು ಎಂಬುವವರು ಆರೋಪಿಗೆ 271 ಗ್ರಾಂ ಚಿನ್ನದ ಗಟ್ಟಿಯನ್ನು ವಿವಿಧ ಮಾದರಿಯ ಚಿನ್ನಾಭರಣಗಳನ್ನು ಮಾಡಲು ನೀಡಿದ್ದರು. ಆದರೆ ಈತ ಆಭರಣ ಮಾಡಿಕೊಡದೆ ವಂಚಿಸಿ ತಲೆಮರೆಸಿಕೊಂಡಿದ್ದ. ಮೂರು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣದ ತನಿಖೆ ಕೈಗೊಂಡ ಜಯನಗರ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಆರೋಪಿಯ ವಿಚಾರಣೆ ವೇಳೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ನವರತ್ನ ಜ್ಯುವೆಲ್ಲರಿ ಶಾಪ್ನಲ್ಲಿ 717 ಗ್ರಾಂ ಚಿನ್ನದ ಗಟ್ಟಿ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ವಂಚಿಸಿದ್ದ ಚಿನ್ನಾಭರಣಗಳನ್ನು ಮಣಪ್ಪುರಂನಲ್ಲಿ ಅಡಮಾನ ಇಟ್ಟಿರುವ ಬಗ್ಗೆ ಮಾಹಿತಿ ಮೇರೆಗೆ 55 ಲಕ್ಷ ಮೌಲ್ಯದ 947 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು