ಬೆಂಗಳೂರು: ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಭಾನುವಾರ ಸಂಜೆ ಪೂರ್ವ ವಲಯದ ಕೋವಿಡ್ ವಾರ್ ರೂಮ್ಗೆ ಭೇಟಿ ನೀಡಿ, ಪರಿಶೀಲಿಸಿದರು.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಅಲ್ಲದೇ, ಪೂರ್ವ ವಲಯದಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕಡ್ಡಾಯವಾಗಿ ಎಎಲ್ಎಸ್ ಸೌಲಭ್ಯಗಳನ್ನೊಳಗೊಂಡ ಆ್ಯಂಬುಲೆನ್ಸ್ಗಳನ್ನು ಹೆಚ್ಚುವರಿಯಾಗಿ ಪಡೆಯಬೇಕು. ಆಯಾ ದಿನದ ಟೆಸ್ಟಿಂಗ್ ಅನ್ನು ಕೂಡಲೇ ಐಸಿಎಂಆರ್ ಪೋರ್ಟ್ಲ್ನಲ್ಲಿ ನೋಂದಾಯಿಸಿ, ಬಹುಬೇಗ ಫಲಿತಾಂಶ ಬರಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಳಂಬ ಕಂಡುಬಂದಲ್ಲಿ ಶೋಕಾಸ್ ನೋಟಿಸ್ ನೀಡುವುದಾಗಿ ಎಚ್ಚರಿಸಿದರು.
ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್ಗೆ ಸರದಿಯಲ್ಲಿ ನಿಲ್ಲುವಂತೆ ವಿಕೇಂದ್ರೀಕರಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಶವಗಳ ಸಾಗಣೆಗೆ ಅಗತ್ಯ ಕ್ರಮ ಹಾಗೂ ಸೌಲಭ್ಯಗಳನ್ನು ಒದಗಿಸಿಕೊಂಡು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ನಾಗರಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಬಿಬಿಎಂಪಿ ಆಯುಕ್ತರು ಆದೇಶಿಸಿದರು.