ಬೆಂಗಳೂರು: ದಿನೇ ದಿನೇ ಬೆಂಗಳೂರಿನಲ್ಲಿ ಜೀವನ ನಡೆಸುವುದು ದುಸ್ತವಾಗಿದ್ದು, ಇದಕ್ಕೆ ಕೋವಿಡ್ ಆರ್ಥಿಕ ಸಂಕಷ್ಟ ಪ್ರಮುಖ ಕಾರಣವಾಗಿದೆ. ಆದರೆ, ಇಂತಹ ಸಂದರ್ಭದಲ್ಲೂ ರಾಜಧಾನಿಯಲ್ಲಿ ವಿದ್ಯುತ್ ದರ ಮಾದರಿಯಂತೆ 'ಕಸಕ್ಕೂ ಕಾಸು' ವಸೂಲಿ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ಪ್ರತಿ ತಿಂಗಳು ವಿದ್ಯುತ್ ದರ ವಸೂಲಿಯಂತೆ ತ್ಯಾಜ್ಯ ವಿಲೇವಾರಿಗೂ ದರ ನಿಗದಿ ಕೂಡ ಮಾಡಲಾಗುತ್ತಿದೆ. ಹಾಗೆಯೇ ವರ್ಷಕ್ಕೊಮ್ಮೆ ತ್ಯಾಜ್ಯ ವಿಲೇವಾರಿಗೂ ಸೆಸ್ ಪಾವತಿಸಬೇಕು ಎನ್ನುವ ಹೊಸ ನಿಯಮ ಜಾರಿಗೆ ಮುಂದಾಗಿದೆ. ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಹಸಿರು ನಿಶಾನೆ ಸಿಕ್ಕರೆ ಬೆಂಗಳೂರಿನ ಮಂದಿಗೆ ಮತ್ತೊಂದು ದರ ಕಡ್ಡಾಯವಾಗಲಿದೆ.
ಪ್ರತಿ ತಿಂಗಳು ಮನೆ ಮನೆಗಳಿಂದ ತ್ಯಾಜ್ಯ ವಿಲೇವಾರಿ ತೆರಿಗೆ ಅಥವಾ ನಿಗದಿತ ದರ ವಸೂಲಿ ಮಾಡಲು ಪಾಲಿಕೆ ಮುಂದಾಗಿದೆ. ಇದರಿಂದ ಪ್ರತಿ ತಿಂಗಳು 40 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದ್ದು, ಕಸದ ಗುತ್ತಿಗೆದಾರರಿಗೆ ಬಿಲ್, ಪೌರಕಾರ್ಮಿಕರಿಗೆ ಸಂಬಳ ನೀಡಲು ಅನುಕೂಲವಾಗಲಿದೆ.
ಕೆಲ ಮಾಹಿತಿಯ ಪ್ರಕಾರ, ವಿದ್ಯುತ್ ಬಿಲ್ ಆಧಾರದ ಮೇಲೆ ತ್ಯಾಜ್ಯ ಬಿಲ್ ನಿಗದಿ ಮಾಡಲಾಗುತ್ತದೆ. ಬೆಂಗಳೂರಿನಲ್ಲಿರುವ ನಿವಾಸಿಗಳು ವಿದ್ಯುತ್ ಬಿಲ್ ಜೊತೆಗೆ ತ್ಯಾಜ್ಯ ತೆರಿಗೆ ಕೂಡಾ ಕಟ್ಟಬೇಕು ಎಂದು ಹೇಳಲಾಗುತ್ತಿದೆ. ಸದ್ಯ ಬಿಬಿಎಂಪಿ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದೆ. ಕಸ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದ್ದು, ನಿರ್ವಹಣೆ ಆದಾಯ ಕ್ರೋಢೀಕರಣಕ್ಕೆ ಇನ್ನೊಂದು ಯೋಜನೆ ರೂಪಿಸಿದೆ.
2011ರಿಂದ ಆಸ್ತಿ ತೆರಿಗೆ ಮೇಲೆ ಸೆಸ್ ಸಂಗ್ರಹಿಸಲಾಗುತ್ತಿದೆ. ಆದರೆ ಇದು ಕಸ ನಿರ್ವಹಣಾ ವೆಚ್ಚದ ಶೇ.15 ರಷ್ಟು ಸಂಗ್ರಹಣೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಮೂಲಕ ಪ್ರತಿ ತಿಂಗಳು ಸಂಗ್ರಹಿಸಲು ನಿರ್ಧಾರ ಮಾಡಲಾಗುತ್ತಿದೆ. ಕಸ ನಿರ್ವಹಣಾ ಬಿಲ್ ಸಂಗ್ರಹಕ್ಕೆ ಬೆಸ್ಕಾಂ ನೆರವು ಕೋರಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹ ತ್ಯಾಜ್ಯ ಉತ್ಪಾದಕರಿಗೆ ವಿದ್ಯುತ್ ಬಿಲ್ ಆಧರಿಸಿ ಪ್ರಸ್ತಾಪಿಸಿರುವ ದರದ ವಿವರ
ವಿದ್ಯುತ್ ಬಿಲ್ | ಕಸದ ಬಿಲ್ |
200 ರೂ. ವರೆಗೆ | 30 ರೂ. |
200-500 ರೂ. | 60 ರೂ. |
500 - 1000 ರೂ. | 100 ರೂ. |
1001 - 2000 ರೂ. | 350 ರೂ. |
3000 ರೂ.ಗಿಂತ ಹೆಚ್ಚು | 500 ರೂ. |
ಮನೆಗಳಲ್ಲಿ ಈ ರೀತಿಯ ಮಾಸಿಕ ಬಿಲ್ ಸಂಗ್ರಹದ ಮೂಲಕ 48.76 ಕೋಟಿ ರೂ. ಸಂಗ್ರಹದ ಅಂದಾಜು ಮಾಡಲಾಗಿದೆ.
ವಾಣಿಜ್ಯ ತ್ಯಾಜ್ಯ ಉತ್ಪಾದಕರು (ಬೃಹತ್ ತ್ಯಾಜ್ಯ ಉತ್ಪಾದಕರನ್ನು ಹೊರತುಪಡಿಸಿ) ಪ್ರಸ್ತಾಪಿಸಿರುವ ಸೆಸ್ ವಿವರ:
ವಿದ್ಯುತ್ ಬಿಲ್ | ಕಸ ದರ |
200 ರೂ.ವರೆಗೆ | ₹ 75 |
200-500 ರೂ. | ₹ 150 |
500 - 1000 ರೂ. | ₹ 300 |
1001 - 2000 ರೂ. | ₹ 600 |
2001 - 3000 ರೂ. | ₹ 800 |
3000 ರೂ.ಗಿಂತ ಹೆಚ್ಚು | ₹ 1200 |
ಈ ರೀತಿ ಮಾಸಿಕ ಸೆಸ್ ಸಂಗ್ರಹದ ಮೂಲಕ ವಾಣಿಜ್ಯ ತ್ಯಾಜ್ಯ ಉತ್ಪಾದಕರಿಂದ 23.93 ಕೋಟಿ ರೂ. ಸಂಗ್ರಹದ ಅಂದಾಜು ಮಾಡಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ