ಬೆಂಗಳೂರು: ದುರ್ಬಲ ವರ್ಗದವರಿಗೆ ಸಹಾಯವಾಗಲೆಂಬ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಬಿಬಿಎಂಪಿ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಯಲಹಂಕದ ಎನ್‌ಇಎಸ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಕರುಣೆ ಕುಟೀರವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಬಿಬಿಎಂಪಿ ಪೌರ ಕಾರ್ಮಿಕ ಮಹಿಳೆಯರಿಗೆ ರೇಷ್ಮೆ ಸೀರೆಯೊಂದಿಗೆ ಬಾಗಿನ ಹಾಗೂ ನೂರು ಮಹಿಳೆಯರಿಗೆ ನೂತನ ಸೀರೆಗಳನ್ನು ವಿತರಿಸುವ ಮೂಲಕ ಕರುಣೆ ಕುಟೀರಕ್ಕೆ ಸಿಎಂ ಕಾರ್ಯದರ್ಶಿ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಚಾಲನೆ ನೀಡಿದರು.
ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ, ಜನರಿಂದ ಜನರಿಗಾಗಿ ಕರುಣೆ ಕುಟೀರ ನಿರ್ಮಿಸಲಾಗಿದೆ. ಜನರು ತಾವು ಉಪಯೋಗಿಸದಿರುವ ಬಟ್ಟೆ, ಪಾತ್ರೆ, ಪುಸ್ತಕ, ಔಷಧಿ ಸೇರಿ ದಿನಬಳಕೆ ವಸ್ತುಗಳನ್ನು ತಂದು ಇಲ್ಲಿ ಇಟ್ಟರೆ ಮಧ್ಯಮ ಹಾಗೂ ಬಡತನ ರೇಖೆಯಲ್ಲಿರುವ ಮಂದಿಗೆ ತಲುಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಯಲಹಂಕ ಕ್ಷೇತ್ರಾದ್ಯಂತ ನಿರ್ಮಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ರಘುಮೂರ್ತಿ ಮಾತನಾಡಿ, ಅದೆಷ್ಟೋ ದುರ್ಬಲ ವರ್ಗದವರಿಗೆ ಧರಿಸಲು ಬಟ್ಟೆ, ಚಪ್ಪಲಿ, ಓದಲು ಪುಸ್ತಕಗಳಿಲ್ಲ. ಹೀಗಾಗಿ ಉಳ್ಳವರು ದುರ್ಬಲ ವರ್ಗದ ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಕರುಣೆ ಕುಟೀರ ನಿರ್ಮಿಸಲಾಗಿದೆ. ತಾವು ದುಡಿವ ದುಡಿಮೆಯಲ್ಲಿ ಕನಿಷ್ಠ 2-3 ಭಾಗವನ್ನು ದುರ್ಬಲ ಜನರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಈ ಭಾಗದಲ್ಲಿ ಹೆಚ್ಚನ ಬಡ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಕನ್ನಡ ಪುಸ್ತಕಗಳನ್ನಿಟ್ಟು ಕನ್ನಡ ಕಪಾಟು ಮಾಡಬೇಕೆಂದುಕೊಂಡಿದ್ದೇವೆ. ಜೊತೆಗೆ ಒಂದು ಫ್ರಿಡ್ಜ್ ಇಟ್ಟು ಸಸ್ಯಾಹಾರಿ ಆಹಾರ ಇರಿಸಲು ಏರ್ಪಾಡು ಮಾಡಲಾಗಿದೆ. ಲಯನ್ಸ್ ಕ್ಲಬ್ ಇದರ ನಿರ್ವಹಣೆ ಹೊಣೆ ಹೊತ್ತಿದೆ ಎಂದು ಯಲಹಂಕ ಕಸಾಪ ಅಧ್ಯಕ್ಷ ಡಾ.ಎಸ್ ಎಲ್ ಎನ್ ಸ್ವಾಮಿ ತಿಳಿಸಿದರು.