ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘ ಅವಧಿಯಿಂದ ಇದ್ದೇನೆ. ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳುವುದಿಲ್ಲ. ದೇವೇಗೌಡರ ಮೇಲೆ ಪೂಜ್ಯ ಭಾವನೆ ಇದೆ. ಆದ್ರೆ, ನಾನು ಯಾವುದೇ ಪಕ್ಷಕ್ಕೆ ಸೇರಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಕಳೆದ 28 ವರ್ಷಗಳಿಂದ ನಾನು ಸಂಸದನಾಗಿದ್ದು, 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೆಲವರು ಪಕ್ಷ ಬಿಟ್ಟು ಮತ್ತೆ ಬಂದಿದ್ದಾರೆ. ಆದರೆ, ನಾನು ಇಲ್ಲಿಯೇ ಗಟ್ಟಿಯಾಗಿ ನಿಂತಿದ್ದೇನೆ. ನಿಷ್ಠಾವಂತ ಕಾಂಗ್ರೆಸ್ ನಾಯಕರು ಇಲ್ಲಿದ್ದೇವೆ. ಯಾವುದೇ ಆತುರದ ನಿರ್ಧಾರವನ್ನು ಮಾಡುವುದಿಲ್ಲ ಎಂದರು.
ರಮೇಶ್ ಕುಮಾರ್ ಒಬ್ಬ ಶಕುನಿ. ಅವರು ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಎಲ್ಲಾ ಪಾತ್ರಗಳನ್ನು ಅವರೇ ಮಾಡುತ್ತಾರೆ. ಸಿದ್ದರಾಮಯ್ಯಗೆ ಅವರ ಮೇಲೆ ಏಕೆ ವಿಶ್ವಾಸ ಇದೆಯೋ ಗೊತ್ತಿಲ್ಲ, ಅವರನ್ನೇ ಕೇಳಬೇಕು. ಬಿಜೆಪಿಗೆ ಹೋಗಿ ಕಾಂಗ್ರೆಸ್ಗೆ ಬರುತ್ತಾರೆ. ಇವರಿಗೆ ಮಾನ-ಮರ್ಯಾದೆ ಇಲ್ಲ. ಯಾಕೆ ಕಾಂಗ್ರೆಸ್ಗೆ ಬಂದಿದ್ದಾರೆ?. ರಾಹುಲ್ ಗಾಂಧಿಯವರಿಗೆ ಸತ್ಯ ಮುಚ್ಚಿಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ನಾರಾಯಣ ಸ್ವಾಮಿ, ನಂಜೇಗೌಡ, ಬೇರೆ ಕಡೆಯಿಂದ ಪಕ್ಷಕ್ಕೆ ಬಂದಿದ್ದಾರೆ. ರಮೇಶ್ ಕುಮಾರ್ ಕೂಡ ಬೇರೆ ಕಡೆಯಿಂದ ಬಂದಿದ್ದಾರೆ. ಅವರನ್ನು ಸೇರಿಸಿಕೊಳ್ಳುವ ಸಂದರ್ಭದಲ್ಲಿ ನನ್ನನ್ನು ಕೇಳಿ ಸೇರಿಸಿಕೊಂಡ್ರು. ನಾನು ಆಗ ಎಂಪಿ ಆಗಿದ್ದೆ. ಕೊತ್ತನೂರು ಮಂಜುನಾಥ ಅವರನ್ನು ಸೇರಿಸಿಕೊಳ್ಳುವ ಸಂಬಂಧ ನನ್ನ ಕೇಳಿ ಎಂದಿದ್ದೆ. ಆದ್ರೆ, ನನಗೆ ಹೇಳದೇ ಕೇಳದೇ ಈಗ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸೌಜನ್ಯಕ್ಕಾದರೂ ನನಗೆ ಕೇಳಬೇಕಿತ್ತು. ಇವರೆಲ್ಲಾ ಪಕ್ಷ ಬಿಟ್ಟು ಹೋಗಿ ಮತ್ತೆ ಬಂದಿದ್ದಾರೆ. ಇವರಿಂದ ಕಾಂಗ್ರೆಸ್ ಕೋಲಾರದಲ್ಲಿ ಬರುತ್ತಾ?, ಬರುತ್ತೆ ಅನ್ನೋದಾದ್ರೆ ನನ್ನ ಅಭ್ಯಂತರ ಏನೂ ಇಲ್ಲ.
ನನ್ನ ಬಿಟ್ಟು ಕಾಂಗ್ರೆಸ್ಗೆ ಮಂಜುನಾಥ ಮತ್ತು ಸುಧಾಕರ್ ಅವರನ್ನು ಸೇರಿಸಿಕೊಂಡಿದ್ದಾರೆ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಕಾಂಗ್ರೆಸ್ನಲ್ಲೇ ಉಳಿಯುತ್ತೇನೆ. ಹೈಕಮಾಂಡ್ ಏನು ಹೇಳುತ್ತೆ ಅಂತ ಕೇಳುತ್ತೇನೆ. ಐದು ಲಕ್ಷ ಮತದಾರರ ಬಳಿಗೆ ನಾನು ಹೋಗುತ್ತೇನೆ. ಇವತ್ತಿನ ಪರಿಸ್ಥಿತಿ ಬಗ್ಗೆ ಹೇಳುತ್ತೇನೆ. ಸಮಯಕ್ಕಾಗಿ ನಾನು ಕಾಯುತ್ತೇನೆ. ತಾಲೂಕು ಪ್ರವಾಸ ಮಾಡಿ, ಅಭಿಪ್ರಾಯ ಸಂಗ್ರಹ ಮಾಡ್ತೇನೆ. ನನ್ನ ಕಡೆಗಣನೆ ಬಗ್ಗೆ ಹೈಕಮಾಂಡ್ ನಾಯಕರು ಹೇಳಬೇಕು. ಅಲ್ಲಿವರೆಗೆ ಅಭಿಪ್ರಾಯ ಸಂಗ್ರಹ ಮಾಡ್ತೇನೆ. ಕಾರ್ಯಕರ್ತರು ಹೇಳಿದ ಹಾಗೆ ಮುಂದೆ ಕೇಳುತ್ತೇನೆ ಎಂದರು.
ಇದನ್ನೂ ಓದಿ: Congress ಅಧಿಕಾರಕ್ಕೆ ಬರುವುದು ಖಚಿತ, CM ಆಯ್ಕೆ ಮಾಡುವುದು ಶಾಸಕರು & ಹೈಕಮಾಂಡ್: ಮುನಿಯಪ್ಪ