ಬೆಂಗಳೂರು: ಮುಂದಿನ ಸಲ ನಾವೇ ಅಧಿಕಾರಕ್ಕೆ ಬರುತ್ತೇವೆ. ಉತ್ತರ ಕರ್ನಾಟಕದಲ್ಲಿ ನಮ್ಮ ಸ್ಥಾನಗಳು ಹೆಚ್ಚಾಗಲಿವೆ. ದಕ್ಷಿಣ ಕರ್ನಾಟಕದಲ್ಲೂ ಹೆಚ್ಚು ಸ್ಥಾನ ಪಡೆದು ಪಕ್ಷ ಗಟ್ಟಿ ಮಾಡುತ್ತೇವೆ. ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ದೇವನಹಳ್ಳಿ ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಳ್ಳಮುನಿಶಾಮಪ್ಪ ಪಕ್ಷ ಸೇರ್ಪಡೆ ಆಗಿದ್ದರಿಂದ ಬಿಜೆಪಿಗೆ ಹೆಚ್ಚಿನ ಶಕ್ತಿ ಬಂದಿದೆ. ಬಿಜೆಪಿ ನೇತೃತ್ವದ ರಾಜಕೀಯ ಸಮೀಕರಣ ಆರಂಭವಾಗಿದೆ. ಮಾಗಡಿಯಿಂದ ಹಿಡಿದು ದೇವನಹಳ್ಳಿ ತನಕ ಎಲ್ಲಾರೂ ಪಕ್ಷ ಸೇರುತ್ತಿದ್ದಾರೆ. ಇನ್ನೂ ಒಂದು ವರ್ಷ ಇದೇ ರೀತಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಇರಲಿದೆ ಎಂದರು.
ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂದು ಪೋಸ್ ಕೊಡುತ್ತಿದ್ದಾರೆ. ತಾವು ಪೊಳ್ಳು ಎಂದು ಅವರಿಗೇ ಗೊತ್ತಿದೆ. ರಾಜ್ಯದ ಜನ ಸರ್ವಾಧಿಕಾರಿಯನ್ನು ಒಪ್ಪಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸರ್ವಾಧಿಕಾರಿ ಪಕ್ಷ ಎಂದು ಪರೋಕ್ಷವಾಗಿ ಸಿಎಂ ಹೇಳಿದರು.
ಪಿಳ್ಳ ಮುನಿಶಾಮಪ್ಪ ಬಿಜೆಪಿ ಸೇರ್ಪಡೆ: 2013- 18ರಲ್ಲಿ ಜೆಡಿಎಸ್ನಿಂದ ಶಾಸಕರಾಗಿದ್ದ ಪಿಳ್ಳ ಮುನಿಶಾಮಪ್ಪ ತಮ್ಮ ಬೆಂಬಲಿಗರ ಜತೆಗೂಡಿ ಇಂದು ಬಿಜೆಪಿ ಸೇರ್ಪಡೆಯಾದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಡಾ.ಕೆ. ಸುಧಾಕರ್ ಇದ್ದರು.
ಓದಿ: ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ: ಖಾರ್ಕಿವ್ನಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್ ಸಾವು