ಬೆಂಗಳೂರು: ಐಟಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ₹ 8.60 ಕೋಟಿ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಜಾರಿಗೊಳಿಸಿದ್ದ ಸಮನ್ಸ್‌ಗೆ ತಡೆಯಾಜ್ಞೆ ನೀಡುವಂತೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಪರ ವಕೀಲರು ಇಂದು ಮನವಿ ಸಲ್ಲಿಸಿದ್ದಾರೆ.
ನಿನ್ನೆ ಇಡಿ ನೀಡಿದ್ದ ಸಮನ್ಸ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದರಿಂದ ಡಿ ಕೆ ಶಿವಕುಮಾರ್ ಮತ್ತು ಅವರ ಆಪ್ತರಿಗೆ ಬಂಧನ ಭೀತಿ ಎದುರಾಗಿದೆ. ಇದರಿಂದ ಮತ್ತೆ ಅದಕ್ಕೆ ಈ ಹಿಂದೆ ಹೈಕೋರ್ಟ್ ನೀಡಿದ್ದ ಮಂಧ್ಯಂತರ ತಡೆಯಾಜ್ಞೆ ವಿಸ್ತರಣೆಗೆ ಮಾಡಬೇಕು ಎಂದು ವಕೀಲರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಇಂದು ಮಧ್ಯಾಹ್ನ 12.30ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಇಡಿ ಅಧಿಕಾರಿಗಳು ತಕ್ಷಣ ಬಂಧಿಸದಂತೆ ಮಧ್ಯಂತರ ತಡೆಗೆ ಮನವಿ ಸಲ್ಲಿಸಿದ್ದಾರೆ. ಶಿವಕುಮಾರ್ ನಿವಾಸಕ್ಕೆ ಗುರುವಾರ ರಾತ್ರಿ 10ಗಂಟೆ ಸುಮಾರಿಗೆ ನಾಲ್ವರು ಇಡಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಅದಕ್ಕೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕಿದೆ. ಅಲ್ಲಿಯ ತನಕ ಬಂಧಿಸದಂತೆ ಇಡಿಗೆ ಸೂಚಿಸಬೇಕು ಎಂದು ವಕೀಲ ಬಿ ವಿ ಆಚಾರ್ಯ ವಾದ ಮಂಡಿಸಿದ್ದಾರೆ.