ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆಯಲ್ಲಿ ವಸತಿ ಸಚಿವ ವಿ.ಸೋಮಣ್ಣಗೆ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ನೋಟಿಸ್ ನೀಡಿದೆ. ಹೀಗಾಗಿ, ತಕ್ಷಣವೇ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿ, ರಾಮಕೃಷ್ಣ ಎಂಬುವರು ಸಲ್ಲಿಸಿರುವ ಖಾಸಗಿ ದೂರಿನ ಹಿನ್ನೆಲೆಯಲ್ಲಿ ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯವು ಆದಾಯಕ್ಕೆ ಮೀರಿದ ಆಸ್ತಿ ಗಳಿಕೆ ಸಂಬಂಧಿಸಿದಂತೆ ಸಚಿವ ಸೋಮಣ್ಣ ಅವರಿಗೆ ಏಪ್ರಿಲ್ 16 ರಂದು ಖುದ್ದು ಹಾಜರಾಗುವಂತೆ ಸಮನ್ಸ್ ನೀಡಿದೆ.
ಅಲ್ಲದೆ, ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಡಿವೈ ಎಸ್ ಪಿ ಸಲ್ಲಿಸಿದ್ದ ‘ಬಿ ರಿಪೋರ್ಟ್’ ಅನ್ನು ವಜಾಗೊಳಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಮತ್ತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಲು ಆದೇಶಿಸಿದೆ. ಹಾಗಾಗಿ, ಆರೋಪಿ ಸ್ಥಾನದಲ್ಲಿರುವ ಸೋಮಣ್ಣ ಹೇಗೆ ಸಚಿವರಾಗಿ ಮುಂದುವರೆಯಲು ಸಾಧ್ಯ, ಅವರಾಗೇ ರಾಜೀನಾಮೆ ನೀಡಬೇಕು. ಇಲ್ಲ ಅವರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿದರು.
ಜಾರ್ಜ್ ರಾಜೀನಾಮೆ ನೀಡಿದ್ರು: ಈ ಹಿಂದೆ ಡಿವೈಎಸ್ಪಿ ಗಣಪತಿ ಗಣಪತಿ ಭಟ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿರಲಿಲ್ಲವಾ? ಈಗ ಕ್ರಿಮಿನಲ್ ಕೇಸ್ ಆರೋಪ ಎದುರಿಸುತ್ತಿರುವ ಸೋಮಣ್ಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸೋಮಣ್ಣ ಅವರ ಬೆಂಬಲಕ್ಕೆ ನಿಂತ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ, ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲು ಸೋಮಣ್ಣ ವಿರುದ್ಧ ಸಿಐಡಿಗೆ ಅರ್ಜಿ ಬರೆದಿದ್ದರು. ಆಗ ನೊಟೀಸ್ ಕೊಡಲಾಗಿತ್ತು. ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಸಮರ್ಥಿಸಿದರು.
ಎಫ್ಐಆರ್ ಆದರೆ ಕ್ರಿಮಿನಲ್ಗಳಲ್ಲ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಆಗಿ ಬಿ ರಿಪೋರ್ಟ್ ಕೂಡ ಸಲ್ಲಿಕೆಯಾಗಿದೆ. ಖಾಸಗಿ ವ್ಯಕ್ತಿಯೊಬ್ಬ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಸಮನ್ಸ್ ನೀಡಿದೆ. ಯಾರ್ಯಾರ ಮೇಲೆ ಎಫ್ಐಆರ್ ಆಗಿದೆ ಅವರೆಲ್ಲಾ ಅಪರಾಧಿಗಳು ಅಂತ ಹೇಳಲಿಕ್ಕೆ ಆಗುವುದಿಲ್ಲ ಎಂದರು.
ಎಫ್ಐಆರ್ ಆಗಿ ತನಿಖೆ ಆಗಲಿ, ವಿಚಾರಣೆ ನಡೆಯಲಿ. ಸೋಮಣ್ಣ ವಿರುದ್ಧ ವಿಚಾರಣೆ ಶುರುವಾಗಿಲ್ಲ. ಕೇಸ್ ಸಹ ದಾಖಲಾಗಿಲ್ಲ. ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಆಗ ಸಿದ್ದರಾಮಯ್ಯ ಮಾತನಾಡಿ, ನೀವು ಇಷ್ಟು ಭಂಡತನ ತೋರಿಸಿದ್ರೆ ನಾನು ಏನು ಮಾಡಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎಂದೂ ಸೆಗಣಿನೇ ಎತ್ತದವರು ಗೋಮಾತೆ ಬಗ್ಗೆ ಪಾಠ ಮಾಡುತ್ತಾರೆ: ಸಿದ್ದರಾಮಯ್ಯ