ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಸಮೀಪದ ಸುಮಾರು 1,800 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಕರ್ನಾಟಕ ಪ್ರದೇಶಾಭಿವೃದ್ಧಿ ಕೈಗಾರಿಕಾ ಮಂಡಳಿ (ಕೆಐಎಡಿಬಿ) ವಿರುದ್ಧ ಕಳೆದ 29 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿಯಾದರು. ಈ ವೇಳೆ ಯಾವುದೇ ಕಾರಣಕ್ಕೂ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಒಮ್ಮೆ ಭೂಮಿಯನ್ನು ಕಳೆದುಕೊಂಡರೆ ಮತ್ತೆ ಗಳಿಸಲು ಸಾಧ್ಯವಿಲ್ಲ. ತಲೆತಲಾಂತರಗಳಿಂದ ಬಾಳಿ ಬದುಕಿದ ಭೂಮಿಯನ್ನು ಕಳೆದುಕೊಳ್ಳುವುದು ಪ್ರತಿಯೊಬ್ಬರಿಗೂ ನೋವಿನ ಸಂಗತಿ. ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಹೇಳಿದರು.
ಕೆಲ ದಲ್ಲಾಳಿಗಳು ಬಂದು ರೈತರಿಗೆ ಆಸೆ ಆಮಿಷ ಹುಟ್ಟಿಸಿ ತಲೆಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇವರ ಮಾತು ಕೇಳಬೇಡಿ. ರಾಜಧಾನಿ ಬೆಂಗಳೂರು ನಗರದ ಅಭಿವೃದ್ಧಿಗಾಗಿ ನಗರದ ಸುತ್ತಮುತ್ತಲ ಜನರು ದೊಡ್ಡ ತ್ಯಾಗವನ್ನೇ ಮಾಡಿದ್ದಾರೆ. ಕೈಗಾರಿಕೆ, ಬಡಾವಣೆಗಳ ನಿರ್ಮಾಣ, ಅಭಿವೃದ್ಧಿ ಯೋಜನೆಗಳಿಗೆಲ್ಲ ರೈತರು ಭೂಮಿ ನೀಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು. ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ನಾಯಕ ಮುನೇಗೌಡ, ಹಲವು ರೈತ ಮುಖಂಡರು ಇದ್ದರು.
ಇದನ್ನೂ ಓದಿ : ಲಷ್ಕರ್-ಎ-ತೊಯ್ಬಾದ ಮೂವರು 'ಹೈಬ್ರಿಡ್ ಉಗ್ರರ' ಬಂಧನ