ಬೆಂಗಳೂರು : ಜೆಡಿಎಸ್‌ನವರು ಬಿಜೆಪಿಯವರ ಬಾಲಂಗೋಚಿಗಳು ಇದ್ದ ಹಾಗೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು. ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ಮಾಜಿ ಎಂಎಲ್ಸಿ ಕಾಂತರಾಜು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನದ ವಿರೋಧಿಗಳು. ರಾಜ್ಯದಲ್ಲಿ ಕೆಟ್ಟ ಸರ್ಕಾರ ನಡೆಸುತ್ತಿದ್ದಾರೆ. ಅವರಿಗೆ ಬಾಲಂಗೋಚಿಗಳಾಗಿ ಜೆಡಿಎಸ್‌ನವರು ಇದ್ದಾರೆ ಎಂದು ಟೀಕಿಸಿದರು.
ದೇಶವನ್ನು ಮುನ್ನಡೆಸುವ ಶಕ್ತಿ ಇರುವ ಏಕೈಕ ಪಕ್ಷ ಅಂದರೆ ಅದು ಕಾಂಗ್ರೆಸ್. ಕೇಂದ್ರದಲ್ಲಿ ಬಿಜೆಪಿ 8 ವರ್ಷದಿಂದ ಕೇಂದ್ರದಲ್ಲಿ ಆಡಳಿತ ಮಾಡುತ್ತಿದ್ದರೂ ಜನಪರ ಕಾರ್ಯ ಮಾಡಿಲ್ಲ. 40 ವರ್ಷದಿಂದ ನಾನೂ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಇಷ್ಟೊಂದು ಭ್ರಷ್ಟಾಚಾರ ನಡೆಸುವ ರಾಜ್ಯ ಸರ್ಕಾರವನ್ನು ನಾನು ನೋಡಿಲ್ಲ ಎಂದು ಆರೋಪಿಸಿದರು.
ರಾಜಕೀಯ ನಿವೃತ್ತಿ ಪಡೆಯುವೆ
ಟೆಂಡರ್ ಸಿಗಬೇಕಾದರೆ ಶೇ.40ರಷ್ಟು ಲಂಚ ನೀಡಬೇಕು. ನಾನು ಸಿಎಂ ಆಗಿದ್ದಾಗ ಲಂಚ ತಗೊಂಡಿದ್ದೆ ಎಂದು ಯಾರಾದರೂ ಹೇಳಿದರೆ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬಿಜೆಪಿಗೆ, ಜೆಡಿಎಸ್ಗೆ ಸಿದ್ಧಾಂತಗಳೇ ಇಲ್ಲ. ರಾಜಕೀಯ ಸಿದ್ದಾಂತ ಇಲ್ಲದೇ ಇದ್ರೆ ಅದು ರಾಜಕೀಯ ಪಕ್ಷವೇ ಅಲ್ಲ ಎಂದರು.
ಜೆಡಿಎಸ್ ಮಾಡೋದು ಅವಕಾಶವಾದಿ ರಾಜಕಾರಣ. ಬಿಜೆಪಿಯ ಮೂಲ ಆರ್ಎಸ್ಎಸ್. ದೇವರು, ಜಾತಿ ವಿಚಾರಗಳನ್ನ ಇಟ್ಟುಕೊಂಡು ಜನರನ್ನು ಮತಾಂಧರನ್ನಾಗಿ ಮಾಡ್ತಾರೆ. ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡುವ ಪಕ್ಷ ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.
ಇನ್ನಷ್ಟು ಜನರು ಬರ್ತಾರೆ
ನಮ್ಮ ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಬರೋರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಳ್ಳೋಕೆ ಆಗಲ್ಲ. ಪಕ್ಷದ ಸಿದ್ಧಾಂತಗಳನ್ನ ಒಪ್ಪಿ ಬರಬಹುದು. ಬಿಜೆಪಿ, ಜೆಡಿಎಸ್ನಿಂದ ಬರುವವರು ಹಲವರು ಅರ್ಜಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಬಹಳ ಮಂದಿ ಬಿಜೆಪಿ, ಜೆಡಿಎಸ್ನಿಂದ ಕಾಂಗ್ರೆಸ್ಗೆ ಬರ್ತಾರೆ ಎಂದರು.
ಮೇಕೆದಾಟು ಪಾದಯಾತ್ರೆಯ ಹಿನ್ನೆಲೆ ನನ್ನ ಮೇಲೆ ಮೂರು ಕೇಸ್ ಹಾಕಿದ್ದಾರೆ. ಡಿ.ಕೆ. ಶಿವಕುಮಾರ್ ಮೇಲೆ 4 ಕೇಸ್ ಹಾಕಿದ್ದಾರೆ. ಮಕ್ಕಳ ಜೊತೆ ಬೆರೆತಿದ್ದಕ್ಕೆ ಅದಕ್ಕೊಂದು ಕೇಸ್ ಹಾಕಿದ್ದಾರೆ. ಅದರಲ್ಲಿ ಏನು ತಪ್ಪಿದೆ ಎಂದು ನನಗೆ ಅರ್ಥ ಆಗುತ್ತಿಲ್ಲ. ಆದ್ರೆ, ಬಿಜೆಪಿಯವರ ಮೇಲೆ ಕೇಸ್ ಹಾಕಲ್ಲ. ಅವರು ಕೋವಿಡ್ ನಿಯಮಗಳನ್ನ ಉಲ್ಲಂಘಿಸಿದ್ರೂ ಕೇಸ್ ಹಾಕಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: Video: ಆಸ್ಪತ್ರೆಯಿಂದ ಹೆಂಡ್ತಿಯ ಮೃತದೇಹ ಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋದ ಗಂಡ!