ಬೆಂಗಳೂರು: ಪ್ರವಾಹದಿಂದ ಉಂಟಾದ ನಷ್ಟದ ಪರಿಹಾರ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕೆಲವು ಮಾರ್ಪಾಡು ಮಾಡುವಂತೆ ರಾಜ್ಯಕ್ಕೆ ಕೇಂದ್ರದ ತಂಡ ಸೂಚನೆ ನೀಡಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರದ ತಂಡದ ಜತೆ ಕಂದಾಯ ಸಚಿವ ಆರ್.ಅಶೋಕ್ ಅವರು ಮಾಹಿತಿಯನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ನೆರವು ಕೋರಿ ಸಲ್ಲಿಕೆಯಾಗಿರುವ ಪ್ರಸ್ತಾವನೆ ಮಾದರಿ ಸರಿಯಾಗಿಲ್ಲ ಎಂದು ಕೇಂದ್ರದ ತಂಡ ತಿಳಿಸಿದೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ರಾಜ್ಯ ಸರ್ಕಾರವು 10 ದಿನದಲ್ಲಿ ಹೊಸ ಪ್ರಸ್ತಾವನೆ ಸಲ್ಲಿಕೆ ಮಾಡುವುದಾಗಿ ತಿಳಿಸಿತು.
ಈ ವೇಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಮತ್ತು ಸಂತ್ರಸ್ತರಿಗೆ ರಾಜ್ಯ ಸರ್ಕಾರ ನೀಡಿರುವ ಸವಲತ್ತು ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಾಯಿತು. ವಿಧಾನಸೌಧದಲ್ಲಿ ನಿನ್ನೆ ನಡೆದ ಕೇಂದ್ರದ ತಂಡದ ಜತೆ ಕಂದಾಯ ಸಚಿವ ಆರ್.ಅಶೋಕ್ ಸಭೆ ನಡೆಸಿದರು. ಈ ವೇಳೆ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಕೇಂದ್ರದ ತಂಡಕ್ಕೆ ಮಾಹಿತಿ ನೀಡಿದರು. ನೆರೆಗೆ ಸಂಭವಿಸಿದ ಹಾನಿ ಬಗ್ಗೆ ಸವಿವರ ಅಂಕಿಅಂಶ ನೀಡಿದರು. ಈ ಬಾರಿ ಸಂಭವಿಸಿದ ಮೂರು ಬಾರಿಯ ಅತಿವೃಷ್ಟಿಗೆ 1,320.48 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರ ಬೆಳೆ ಹಾನಿಗೆ 577.84 ಕೋಟಿ ರೂ., ಪ್ರವಾಹ ಪರಿಹಾರ 294.64 ಕೋಟಿ ರೂ., ಮೂಲಸೌಕರ್ಯ ದುರಸ್ತಿ 473 ಕೋಟಿ ರೂ., ಅಗ್ನಿಶಾಮಕ ಇಲಾಖೆಗೆ 20 ಕೋಟಿ ರೂ. ಸೇರಿದಂತೆ ಒಟ್ಟು 1320.48 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಸಚಿವ ಆರ್.ಅಶೋಕ್ ಮಾಡಿರುವ ಮನವಿಗೆ ಕೇಂದ್ರದ ತಂಡವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಪರಿಹಾರ ಮೊತ್ತ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅಶ್ವಾಸನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರದಿಂದ ಬಂದ ತಂಡಗಳು ಮೂರು ತಂಡವಾಗಿ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಹಿರಿಯ ಅಧಿಕಾರಿಗಳಾದ ರಮೇಶ್ ಕುಮಾರ್ ಘಂಟ ಮತ್ತು ಡಾ.ಭರತೆಂದು ಕುಮಾರ್ ಸಿಂಗ್ ಮೊದಲ ತಂಡವು ಕಲಬುರಗಿ ಜಿಲ್ಲೆಗೆ ಭೇಟಿ ನೀಡಿದೆ. ಡಾ.ಮನೋಹರನ್ ಮತ್ತು ಗುರುಪ್ರಸಾದ್ ಅವರ ಎರಡನೇ ತಂಡವು ವಿಜಯಪುರ ಜಿಲ್ಲೆಗೆ ಮತ್ತು ಸದಾನಂದ ಬಾಬು ಮತ್ತು ದೀಪ್ ಶೇಖರ್ ಸಿಂಗಲ್ ಅವರ ಮೂರನೇ ತಂಡವು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಕೇಂದ್ರ ತಂಡಕ್ಕೆ ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ವಿವರಣೆ ಒದಗಿಸಲಾಯಿತು.
ಪ್ರವಾಹ ಪೀಡಿತ ಕುಟುಂಬಗಳಿಗೆ ತಕ್ಷಣ ಪರಿಹಾರವಾಗಿ 27,773 ಕುಟುಂಬಕ್ಕೆ 10 ಸಾವಿರ ರೂ.ನಂತೆ 27.77 ಕೋಟಿ ರೂ. 90 ಮಾನವ ಜೀವಹಾನಿಗೆ ತಲಾ 5 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಮನೆಹಾನಿ ಪರಿಹಾರವಾಗಿ 151.73 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರವಾಹದಿಂದ ಹಾನಿಯಾದ ಕೊಡಗು ಜಿಲ್ಲೆಯ ಮೂಲಸೌಕರ್ಯಗಳ ದುರಸ್ಥಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 22.19 ಕೋಟಿ ರೂ.ನ್ನು ಕೊಡಗು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದರು.