ಬೆಂಗಳೂರು: ನಗರದ ಸಂಡೇ ಬಜಾರ್ ಪಕ್ಕದ ಕಾಚರಕನಹಳ್ಳಿಯಲ್ಲಿ ಕಿಡಿಗೇಡಿಗಳು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದ ಘಟನೆಯಲ್ಲಿ ನಿರ್ವಸಿತರಾಗಿರುವ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದ ಘಟನೆ ಕುರಿತು ವಕೀಲೆ ವೈಶಾಲಿ ಹೆಗ್ಡೆ ಬರೆದಿದ್ದ ಪತ್ರ ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಓದಿ-ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಪ್ರಕರಣ: ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್
ಪೀಠ ತನ್ನ ತೀರ್ಪಿನಲ್ಲಿ, ಲಾಕ್ಡೌನ್ ವೇಳೆ ಮಾರ್ಚ್ 28 ಹಾಗೂ 30ರಂದು ಕಾರ್ಮಿಕರಿಲ್ಲದ ಸಂದರ್ಭವನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಂಡು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರ ಹಿಂದೆ ಭೂ ಮಾಫಿಯಾ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಕಾರ್ಮಿಕರ ಮೂಲ ಹಕ್ಕುಗಳನ್ನು ರಕ್ಷಿಸುವ ಅಗತ್ಯವಿದ್ದು, ಸರ್ಕಾರ ಮುಂದಿನ ಎರಡು ತಿಂಗಳಲ್ಲಿ ನಿರ್ವಸಿತ ಕಾರ್ಮಿಕರೆಲ್ಲರಿಗೂ ಒಂದೇ ಮಾದರಿಯ ಶೆಡ್ಗಳನ್ನು ನಿರ್ಮಿಸಿಕೊಡಬೇಕು ಎಂದು ಮಧ್ಯಂತರ ಆದೇಶ ನೀಡಿದೆ.
ಸಂವಿಧಾನದ ವಿಧಿ 21 ಜೀವಿಸುವ ಹಕ್ಕನ್ನು ನೀಡಿದೆ. ಅದರಂತೆ ಕಾರ್ಮಿಕರಿಗೆ ಸರ್ಕಾರ ಶೆಡ್ಗಳನ್ನು ನಿರ್ಮಿಸಿಕೊಡಬೇಕಾದ ಜವಾಬ್ಜಾರಿ ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಘಟನೆಯಲ್ಲಿ ಗುಡಿಸಲುಗಳನ್ನು ಕಳೆದುಕೊಂಡಿರುವ ಕಾರ್ಮಿಕ ಕುಟುಂಬಗಳಿಗೆ ತಲಾ14,100 ರೂಪಾಯಿಯನ್ನು ಮೂರು ವಾರಗಳಲ್ಲಿ ಪರಿಹಾರವಾಗಿ ನೀಡಬೇಕು. ನ್ಯಾಯಾಲಯದ ಆದೇಶದ ಅನುಪಾಲನಾ ವರದಿಯನ್ನು 2021ರ ಫೆಬ್ರವರಿ 6 ರ ಒಳಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಫೆ. 11ಕ್ಕೆ ಮುಂಂದೂಡಿದೆ.