ಬೆಂಗಳೂರು: ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಮಹಿಳಾ ಅಧಿಕಾರಿ ಸವಿತಾ ಹಂಡೆ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗುವಂತೆ ಬ್ಯಾಚ್ ಮೇಟ್ ಆಗಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಶುಭ ಹಾರೈಸಿದ್ದಾರೆ.
ಮಹಾರಾಷ್ಟ್ರ ಮೂಲದ ಐಪಿಎಸ್ ಅಧಿಕಾರಿ ಸವಿತಾ ಹಂಡೆ ಕರ್ನಾಟಕದಲ್ಲಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದರು. ಹೊಳೆನರಸೀಪುರ, ಬೀದರ್ನಲ್ಲಿ ಎಎಸ್ಪಿ ಆಗಿ ಬಳಿಕ ಉಡುಪಿ ಮತ್ತು ಹಾಸನ ಜಿಲ್ಲೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಅಡ್ಮಿನ್ ವಿಭಾಗದ ಡಿಸಿಪಿ ಆಗಿ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ 2000ದಲ್ಲಿ ಮುಂಬಡ್ತಿ ಪಡೆದು ಕೇಂದ್ರ ಸೇವೆಗೆ ನಿಯೋಜಿಸಲಾಗಿತ್ತು.
ಓದಿ-ಭಾರತೀಯ ಕಾನ್ಸುಲೇಟ್ ಕಚೇರಿಗಳಿಗೆ ನುಗ್ಗಿ ಕಾರುಗಳನ್ನ ಹೊತ್ತೊಯ್ದ ತಾಲಿಬಾನ್
ಬಳಿಕ ವಿಶ್ವಸಂಸ್ಥೆ ಭದ್ರತಾ ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಸದ್ಯ ಕಾಬುಲ್ನಲ್ಲಿ ವಿಶ್ವಸಂಸ್ಥೆ ಸೆಕ್ಯೂರಿಟಿಯ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಕಾಬುಲ್ ನಲ್ಲಿ ಇರುವ ಸವಿತಾ ಅವರು ಕ್ಷೇಮವಾಗಿ ದೇಶಕ್ಕೆ ಮರಳುವಂತಾಗಲಿ ಎಂದು ರೈಲ್ವೇ ಎಡಿಜಿಪಿ ಭಾಸ್ಕರ್ ರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶುಭ ಕೋರಿದ್ದಾರೆ.
ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ ಹಾಗೂ ರಾಮಜನ್ಮ ಭೂಮಿ ಹೋರಾಟದ ಸಂದರ್ಭದಲ್ಲಿ ದಕ್ಷವಾಗಿ ಕಾರ್ಯ ನಿರ್ವಹಿಸಿದ್ದರು ಎಂಬುದು ವಿಶೇಷ.