ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ಚಾಲಾಕಿ ಬೈಕ್ ಸವಾರನನ್ನು ಮಾಗಡಿ ರಸ್ತೆ ಸಂಚಾರ ಪೊಲೀಸರು ವಶಕ್ಕೆ ಪಡೆದು ಕೆ.ಪಿ.ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಚೋಳರಪಾಳ್ಯ ನಿವಾಸಿ ರಾಮ್ ಗೋಪಾಲ್ ಬಂಧಿತ ಆರೋಪಿ. ನಗರದ ಖಾಸಗಿ ಕಂಪನಿಯಲ್ಲಿ ಡೇಟಾ ಎಂಟ್ರಿಯಾಗಿ ಕೆಲಸ ಮಾಡುತ್ತಿದ್ದ. ಬೈಕ್ ನಂಬರ್ ಮೂಲ ಮಾಲೀಕರಾದ ಬದ್ರಿ ಪ್ರಸಾದ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿ ಬಂಧಿಸಲಾಗಿದೆ.
ಇತ್ತೀಚೆಗೆ ಚೋಳರಪಾಳ್ಯ ಬಳಿ ಸಾರ್ವಜನಿಕ ಸಾರಿಗೆ ಅಡಚಣೆ ಉಂಟಾಗುವ ರಾಮ್ ಗೋಪಾಲ್ ಬೈಕ್ ಪಾರ್ಕಿಂಗ್ ಮಾಡಿದ್ದ. ಈ ಬಗ್ಗೆ ಸ್ಥಳೀಯರು ನಗರದ ಪೊಲೀಸ್ ನಿಯಂತ್ರಣ ಕಚೇರಿಗೆ ಮಾಹಿತಿ ನೀಡಿದ್ದರು. ಇದೇ ಮಾಹಿತಿ ಆಧರಿಸಿ ಮಾಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಪರಿಶೀಲಿಸಿ ನಂಬರ್ ಪ್ಲೇಟ್ ಆಧಾರದ ಮೇರೆಗೆ ಬದ್ರಿಪ್ರಸಾದ್ ನನ್ನ ಸಂಪರ್ಕಿಸಿದಾಗ ಬೈಕ್ ತನ್ನೊಂದಿಗೆ ಇರುವುದಾಗಿ ಹೇಳಿದ್ದರು. ಇದರಿಂದ ಅನುಮಾನಗೊಂಡ ತನಿಖೆ ನಡೆಸಿದ ಆರೋಪಿ ರಾಮ್ ಗೋಪಾಲ್ ಬೈಕ್ಗೆ ನಕಲಿ ನಂಬರ್ ಅಳವಡಿಸಿರುವುದು ಗೊತ್ತಾಗಿದೆ. ವಶಕ್ಕೆ ಪಡೆದುಕೊಂಡ ಹೆಚ್ಚಿನ ವಿಚಾರಣೆ ನಡೆಸಿದಾಗ ಕಳೆದ ನಾಲ್ಕು ವರ್ಷಗಳಿಂದ ಬೈಕ್ನಲ್ಲಿ ಓಡಾಡುತ್ತಿರುವ ಬಗ್ಗೆ ಗೊತ್ತಾಗಿದೆ ಎಂದ ಪಶ್ಚಿಮ ವಿಭಾಗದ ಡಿಸಿಪಿ ಕುಲ್ ದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದ್ದ ಒಬ್ಬ, ದಂಡ ಕಟ್ಟಿದ್ದ ಮತ್ತೊಬ್ಬ: 2016ರಲ್ಲಿ ಬೈಕ್ ಕಳ್ಳತನವಾಗಿದೆ ಎಂದು ಮಾರ್ಕೆಟ್ ಪೊಲೀಸ್ ಠಾಣೆಗೆ ರಾಮ್ ಗೋಪಾಲ್ ದೂರು ನೀಡಿದ್ದ. ಇದೇ ಕಾರಣ ನೀಡಿ ಇನ್ಸೂರೆನ್ಸ್ ಕಂಪನಿಯಿಂದ ರಾಮ್ ಗೋಪಾಲ್ ಕ್ಲೈಮ್ ಮಾಡಿಸಿಕೊಂಡಿದ್ದ. 2018ರಲ್ಲಿ ಕಳ್ಳತನವಾಗಿದ್ದ ಬೈಕ್ ಸಿಕ್ಕರೂ ಇನ್ಸೂರೆನ್ಸ್ ಕಂಪನಿಗೆ ತಿಳಿಸದೇ ರಾಮ್ ಗೋಪಾಲ್ ವಂಚಿಸುತ್ತಿದ್ದ. ಬಳಿಕ ಬದ್ರಿಪ್ರಸಾದ್ ಅವರ ಬಳಿಯಿದ್ದ ಬೈಕ್ ನಂಬರ್ ಹೋಲುವಂತೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ನಾಲ್ಕು ವರ್ಷಗಳಿಂದ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ದ. ಈತ ಮಾಡಿದ ತಪ್ಪಿಗೆ ಸಂಚಾರಿ ಪೊಲೀಸರು ಬದ್ರಿಪ್ರಸಾದ್ಗೆ 11 ಸಾವಿರ ದಂಡ ವಿಧಿಸಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.