ಬೆಂಗಳೂರು: ಮಾರಕ ಕೊರೊನಾ ಸೋಂಕು ಪುನಃ ಸ್ಫೋಟಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ದಿನವೊಂದಕ್ಕೆ 12 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಲಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಈ ಸಂಬಂಧ ತಜ್ಣರು ನೀಡಿರುವ ವರದಿ ಆತಂಕಕ್ಕೆ ಕಾರಣವಾಗಿದೆ. ನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅದರ ವೇಗ ಗಮನಿಸಿದರೆ ದಿನವೊಂದಕ್ಕೆ ಹನ್ನೆರಡು ಸಾವಿರ ಪ್ರಕರಣಗಳು ಪತ್ತೆಯಾಗುವ ದಿನಗಳು ಹತ್ತಿರದಲ್ಲೇ ಇವೆ ಎಂದು ತಜ್ಞರು ತಿಳಿಸಿದ್ದಾರೆ.
ಕೊರೊನಾ ಹಬ್ಬುತ್ತಿದ್ದರೂ ಜನರಲ್ಲಿ ಇನ್ನೂ ತಪ್ಪು ಕಲ್ಪನೆ ಇದೆ. ಲಸಿಕೆ ಖಾಲಿಯಾಗಲಿ ಎಂಬ ಕಾರಣಕ್ಕಾಗಿ ಕೊರೊನಾ ನಾಟಕ ನಡೆಯುತ್ತಿದೆ ಎಂಬ ಭಾವನೆ ಇನ್ನೂ ಹಲವರಲ್ಲಿದೆ. ಇದೇ ಕಾರಣಕ್ಕಾಗಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಲು ಜನ ಇನ್ನೂ ಹಿಂದೇಟು ಹಾಕಲು ಇದೇ ಮುಖ್ಯ ಕಾರಣ. ಆದರೆ ತಡವಾಗಿಯಾದರೂ ಈ ಕೊರೊನಾ ತಡೆ ಲಸಿಕೆಯನ್ನು ಪಡೆಯಲೇಬೇಕು ಎಂಬುದು ಜನರಿಗೆ ಮನದಟ್ಟಾಗಲು ಬಹುದಿನ ಬೇಕಾಗಿಲ್ಲ ಎಂಬುದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಕೊರೊನಾ ಸೋಂಕು
ಕೋವಿಡ್ ತನ್ನ ಮುಖ ಬದಲಿಸುತ್ತಿದ್ದು, ಈ ಮುಂಚೆ ತಂಪು ಹವಾಮಾನದಲ್ಲಿ ಅದು ಹೆಚ್ಚು ಹರಡುತ್ತಿತ್ತು. ಆದರೆ, ಈಗ ಕಡುಬೇಸಿಗೆಯ ವಾತಾವರಣವೂ ಸೋಂಕು ಹರಡಲು ನೆರವಾಗುತ್ತಿದ್ದು, ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಂಡು ಬರುವ ರೋಗಗಳ ಜತೆ ಇದೂ ಗಂಭೀರ ಪರಿಣಾಮ ಬೀರುತ್ತಿದೆ. ಈ ಪರಿಸ್ಥಿತಿಯಲ್ಲಿ ಕೊರೊನಾದಿಂದ ಬಚಾವಾಗಲು ಜನ ಶುಚಿತ್ವದ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಅತ್ಯಂತ ಹೆಚ್ಚು ಗಮನ ನೀಡಬೇಕಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.