ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಚಾಮರಾಜನಗರ ಹಾಗು ಕೋಲಾರದ ಕೆಲ ಮತಗಟ್ಟೆಗಳಲ್ಲಿ ಮತಯಂತ್ರ ದೋಷ ಕಾಣಿಸಿಕೊಂಡ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಮತದಾನದ ವೇಳೆ, 4 ನೇ ವಾರ್ಡಿನ ಮತಕೇಂದ್ರದಲ್ಲಿ ಇವಿಎಂ ಕೈಕೊಟ್ಟ ಪರಿಣಾಮ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ಬಳಿಕ ಅಧಿಕಾರಿಗಳು ಮತಯಂತ್ರವನ್ನು ಸರಿಪಡಿಸಿ ಮತದಾನ ಪ್ರಕ್ರಿಯೆ ನಡೆಯಲು ಅನುವು ಮಾಡಿಕೊಟ್ಟಿದ್ದಾರೆ.
ಕೋಲಾರದ ಬಂಗಾರಪೇಟೆ ಪಟ್ಟಣದ ವಾರ್ಡ್ ನಂ.21ಲ್ಲಿ ಆರಂಭದಲ್ಲೇ ಇವಿಎಂ ಕೈ ಕೊಟ್ಟ ಪ್ರಸಂಗ ನಡೆಯಿತು. ಪರಿಣಾಮ ಮತದಾರರು ಸಾಲುಗಟ್ಟಿ ನಿಲ್ಲುವ ದೃಶ್ಯ ಕಂಡುಬಂತು. ಬಳಿಕ ಅಧಿಕಾರಿಗಳು ದೋಷ ಸರಿಪಡಿಸಿದರು.
ರಾಜ್ಯದ 22 ಜಿಲ್ಲೆಯ 61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್ ಹಾಗೂ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಪಾಲಿಕೆ, ಪುರಸಭೆ, ನಗರಸಭೆ ಹಾಗೂ 201 ಗ್ರಾಮ ಪಂಚಾಯಿತಿಗಳ ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.
ಬಿಬಿಎಂಪಿಯ ಸಗಾಯಿಪುರ ವಾರ್ಡ್ 60 , ಕಾವೇರಿಪುರ ವಾರ್ಡ್ 103 ರಲ್ಲಿ ಮತದಾನ ಮಾಡಲು ಜನ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಮತಗಟ್ಟೆ ಅಧಿಕಾರಿಗಳು ಮತದಾರರ ಎಡಗೈ ಉಂಗುರದ ಬೆರಳಿಗೆ ಮತದಾನದ ಗುರುತಿನ ಶಾಹಿ ಹಾಕುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ 4 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು ಬೆಳಗ್ಗೆಯಿಂದಲೂ ಮತದಾರರು ಮತಗಟ್ಟೆಗೆ ಬಂದು ಉತ್ಸುಕರಾಗಿ ಮತ ಚಲಾಯಿಸುತ್ತಿದ್ದಾರೆ.
ತಿಪಟೂರು ನಗರಸಭೆ ಕುಣಿಗಲ್ ಮತ್ತು ಪಾವಗಡ ಪುರಸಭೆ ತುರುವೇಕೆರೆ ಪಟ್ಟಣ ಪಂಚಾಯಿತಿಯ ಒಟ್ಟು 91 ವಾರ್ಡಗಳಿಗೆ ಚುನಾವಣೆ ನಡೆಯುತ್ತಿದೆ.
ಧಾರವಾಡ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ಪ್ರಗತಿಯಲ್ಲಿದೆ.
ಚಿತ್ರದುರ್ಗ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮತದಾನ ನಡೆಯುತ್ತಿದೆ. ಹಿರಿಯೂರು ನಗರಸಭೆ, ಹೊಳಲ್ಕೆರೆ, ಮೊಳಕಾಲ್ಮೂರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಿಂದ ಒಂದು ನಗರ ಸಭೆ, ಎರಡು ಪಟ್ಟಣ ಪಂಚಾಯಿತಿಗೆ ಒಟ್ಟು 198 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.