ಬೆಂಗಳೂರು: ಅವರವರ ಧರ್ಮ, ಹಬ್ಬಗಳನ್ನು ಆಚರಣೆ ಮಾಡುವುದಕ್ಕೆ ರಾಜ್ಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮಾತ್ರ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಗೌರವ ವಂದನೆ ಸ್ವೀಕರಿಸಿದ ನಂತರ ಸುದ್ದಿಗಾರರರೊಂದಿಗೆ ಅವರು ಮಾತನಾಡಿದರು.
ಯುಗಾದಿಯ ಹೊಸ ತೊಡಕು ಹಬ್ಬದ ಹಿನ್ನೆಲೆಯಲ್ಲಿ ಹಲಾಲ್ ಮಾಂಸ ಬಹಿಷ್ಕಾರಕ್ಕೆ ಹಿಂದೂ ಸಂಘಟನೆಗಳ ಒತ್ತಾಯಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಈ ಕುರಿತು ಎಲ್ಲ ಜಿಲ್ಲಾ ಎಸ್ ಪಿ ಗಳು, ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳಲು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪೊಲೀಸ್ ಪದಕ ಪ್ರಧಾನ: ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 135 ಡಿವೈಎಸ್ಪಿ, ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಯಿತು. ಡಿವೈಎಸ್ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್ಪಿ ರಾಘವೇಂದ್ರ ಆರ್ ನಾಯಕ್, ಇನ್ಸ್ಪೆಕ್ಟರ್ಗಳಾದ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ಗಣೇಶ್, ಜನಾರ್ಧನ್, ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಬೊಮ್ಮಾಯಿ ಪದಕವನ್ನು ನೀಡಿ ಗೌರವಿಸಿದರು.
ಕೋರಮಂಗಲದ ಕೆ. ಎಸ್. ಆರ್. ಪಿ (ಮೈದಾನದಲ್ಲೇ ರಾಜ್ಯ ಸಶಸ್ತ್ರ ಮೀಸಲು ಪಡೆ) ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಓದಿ : ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ.. ಯುಗಾದಿ ಹಬ್ಬದಲ್ಲೂ ವಾಹನ ಸವಾರರ ಜೇಬಿಗೆ ಕತ್ತರಿ