ಬೆಂಗಳೂರು: ಶಿಕ್ಷಕರ ವೇತನ ವಿಚಾರ ವಿಧಾನ ಪರಿಷತ್ ಕಲಾಪದಲ್ಲಿಂದು ಪ್ರಸ್ತಾಪವಾಯಿತು. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಹೊಂದಿದ ಉಪನ್ಯಾಸಕರಿಗೆ ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಬಡ್ತಿ ಪಡೆಯದೇ ಇರುವ ಉಪನ್ಯಾಸಕರಿಗೆ 10,15,20,25 ವರ್ಷಗಳ ಕಾಲಮಿತಿ ಬಡ್ತಿ ಮಂಜೂರು ಮಾಡುವ ಕುರಿತು ಸಿಎಂ ಬೊಮ್ಮಾಯಿ ಜೊತೆ ಚರ್ಚೆ ನಡೆಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ವಿಧಾನಪರಿಷತ್ ಕಲಾಪದಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜುಗೆ ಬಡ್ತಿ ಹೊಂದಿದ ಉಪನ್ಯಾಸಕರಿಗೆ 6ನೇ ವೇತನ ಆಯೋಗದ ಶಿಫಾರಸು ಅನ್ವಯ ಬಡ್ತಿ ಪಡೆಯದೆ ಇರುವ ಉಪನ್ಯಾಸಕರಿಗೆ ಕಾಲಮಿತಿ ಬಡ್ತಿ ನೀಡದಿರುವ ಕುರಿತು ನಿಯಮ 330ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಪ್ರಮೋಷನ್ ವ್ಯಾಖ್ಯಾನ ಏನು? ಗೌರವ ಸಂಪಾದನೆಗೆ ವೇತನ ಕಡಿಮೆ ಮಾಡಿಕೊಳ್ಳುವುದಾ ಎಂದು ಕೇಳಿದರು.
ಶಿಕ್ಷಕರಿಗೆ ಸರಿಸಮಾನ ವೇತನ ಕೊಡಬೇಕು, ಯಾವುದೇ ಅಧಿಕಾರಿ ಹುದ್ದೆಯಲ್ಲಿ ಬಡ್ತಿ ಪಡೆದಿದ್ದರೆ ಅವರ ವೇತನ ಕಡಿಮೆಯಾಗಿದೆಯಾ? ಶಾಸಕನಾದವನು ಸಂಸದನಾದಾಗ ವೇತನ ಕಡಿಮೆಯಾಗುತ್ತಾ? ಒಂದು ಬಡ್ತಿ ಕಡಿಮೆಯಾದರೆ ನಿವೃತ್ತಿ ವೇಳೆ ಲಕ್ಷಾಂತರ ಹಣ ಕಳೆದುಕೊಳ್ಳುತ್ತಾನೆ, ಅಂತಹ ಘೋರ ಅನ್ಯಾಯ ಸರ್ಕಾರದಿಂದ ಆಗಬಾರದು. ಇದನ್ನು ಸರಿಪಡಿಸಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ವರ್ಗವಾದವರಿಗೆ ಕೇವಲ ವೇತನ ಮಾತ್ರ ಕಡಿಮೆಯಾಗಿಲ್ಲ, ಅವರಿಗೆ ಅವಮಾನವೂ ಆಗಿದೆ. ಪ್ರಮೋಷನ್ ಆಗದೆ ಪ್ರಾಥಮಿಕ ಶಾಲೆಯಲ್ಲೇ ಕೆಲಸ ಮಾಡುತ್ತಿದ್ದರೆ, ಈಗ ಪಡೆಯುತ್ತಿರುವುದಕ್ಕಿಂತ 8 ಸಾವಿರ ಹೆಚ್ಚು ವೇತನ ಬರ್ತಾ ಇತ್ತು. ಪದವಿ ಪೂರ್ವಕ್ಕೆ ಹೋಗದೆ ಪ್ರೌಢ ಶಾಲೆಯಲ್ಲೇ ಇದ್ದರೆ 10 ಸಾವಿರ ಹೆಚ್ಚು ವೇತನ ಪಡೆಯುತ್ತಿದ್ದರು.
ಹಾಗಾಗಿ ಗೌರವ ಸ್ಥಾನಮಾನದೊಂದಿಗೆ ವೇತನ ಹೆಚ್ಚಳ ಮಾಡಬೇಕು. ವೇತನ ಆಯೋಗದ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು, ಕಾಲಮಿತಿಯಲ್ಲಿ ಲೋಪವನ್ನು ಸರಿಪಡಿಸಿ ಗೌರವಯುತವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು. ಇಲ್ಲದೇ ಇದ್ದರೆ ಯಾರೂ ಪ್ರಾಥಮಿಕದಿಂದ ಪ್ರೌಢಕ್ಕೆ, ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಪ್ರಮೋಷನ್ ಪಡೆಯಲ್ಲ ಎಂದರು.
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, ಪತಿ ಹೈಸ್ಕೂಲ್ ಸೇರುತ್ತಾನೆ, ಪತ್ನಿ ಒಂದು ವರ್ಷದ ನಂತರದಲ್ಲಿ ಹೈಸ್ಕೂಲ್ ಸೇರುತ್ತಾಳೆ, ಗಂಡ ಪಿಯುಗೆ ಬಡ್ತಿ ಪಡೆದು ಹೋಗಿ ಕಡಿಮೆ ಸ್ಯಾಲರಿ ಪಡೆದರೆ, ಪತ್ನಿ ಪ್ರೌಢ ಶಾಲೆಯಲ್ಲೇ ಇದ್ದು ಹೆಚ್ಚು ವೇತನ ಪಡೆಯುತ್ತಿದ್ದಾಳೆ. ಇಂತಹ ಸಾಕಷ್ಟು ಉದಾಹರಣೆಗಳು ಇವೆ, ಯಾವ ಪುರುಷಾರ್ಥಕ್ಕೆ ಈ ಬಡ್ತಿ ನೋಡಬೇಕು. ಇದು ನಿಜಕ್ಕೂ ದುರಂತ, ಈ ದುರಂತವನ್ನು ಹೋಗಲಾಡಿಸಬೇಕು. ಇನ್ಕ್ರಿಮೆಂಟ್ ಕಡಿಮೆಯಾದರೆ ಯಾಕೆ ಬಡ್ತಿ ಪಡೆಯಬೇಕು? ಇಲ್ಲಿ ಸೇವಾ ಹಿರಿತನ ಮಾನದಂಡವಲ್ಲ, ವ್ಯಾಸಂಗ ಮಾನದಂಡವಾಗಬೇಕಲ್ಲವೆ? ಎಂದು ಸರ್ಕಾರವನ್ನು ಪ್ರಶ್ನಿಸಿ ಲೋಪ ಸರಿಪಡಿಸಲು ಆಗ್ರಹಿಸಿದರು.
ಜೆಡಿಎಸ್‌ನ ಬೋಜೇಗೌಡ ಮಾತನಾಡಿ, ಶಿಕ್ಷಕರಿಗೆ ಯಾವ ಸರ್ಕಾರದಿಂದಲೂ ಅನ್ಯಾಯವಾಗಿಲ್ಲ, ಎಲ್ಲಾ ಆಗಿರುವುದು ಐಎಎಸ್ ಅಧಿಕಾರಿಗಳಿಂದ. ಎಲ್ಲ ಸರ್ಕಾರದ ಸಚಿವರು ಒಪ್ಪಿರುತ್ತಾರೆ ಆದರೆ ಹಣಕಾಸು ಅಧಿಕಾರಿಗಳು ಫೈಲ್ ತೆಗೆದಿಟ್ಟುಬಿಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶಿಕ್ಷಕ ವರ್ಗಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಸುದೀರ್ಘವಾದ ಚರ್ಚೆಗೆ ಉತ್ತರಿಸಿದ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಿಎಂ, ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆಗೆ ಪ್ರಯತ್ನ ನಡೆಸುತ್ತೇನೆ. ಸಿಎಂ ಜೊತೆ ಮಾತುಕತೆ ನಡೆಸಿ ಸಭೆಗೆ ಸಮಯ ನಿಗದಿಪಡಿಸಲಾಗುತ್ತದೆ. ಶಿಕ್ಷಕರ ಗೌರವ ಜಾಸ್ತಿಯಾಗಬೇಕು ಎಂದು ಬಡ್ತಿ ತೆಗೆದುಕೊಂಡಿರಬೇಕು ಎನಿಸುತ್ತದೆ. ಆದರೆ ಎಲ್ಲ ಸದಸ್ಯರ ಮನವಿ ಪರಿಗಣಿಸಿ ಈ ಸಮಸ್ಯೆ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.