ಬೆಂಗಳೂರು : ಕೊಳಚೆ ನೀರು, ಕಳೆ ಸಸ್ಯಗಳು ಮತ್ತು ಕಟ್ಟಡ ತ್ಯಾಜ್ಯದಿಂದಾಗಿ ಅಳಿವಿನ ಅಂಚಿಗೆ ತಲುಪಿದ್ದ ಕೆರೆಗಳಿಗೆ ಬಿಬಿಎಂಪಿ ಕಾಯಕಲ್ಪ ನೀಡುತ್ತಿದೆ. ಮತ್ತೊಂದೆಡೆ ಅತಿಕ್ರಮಣ ತೆರವಿಗೂ ತಯಾರಿ ಮಾಡಿಕೊಳ್ಳುತ್ತಿದ್ದು, ಆ ಮೂಲಕ ಜಲಮೂಲಗಳ ಸಂರಕ್ಷಣೆಗೆ ಮುಂದಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದ್ದ 28, ಅರಣ್ಯ ಇಲಾಖೆಯ 9 ಮತ್ತು ಬಿಎಂಆರ್‌ಸಿಎಲ್ ಕೆಂಗೇರಿ ಕೆರೆಯನ್ನು ಪಾಲಿಕೆಯ ಸುಪರ್ದಿಗೆ ಹಸ್ತಾಂತರಿಸಲಾಗಿದೆ. ಹೀಗೆ ಒಟ್ಟು ಪಾಲಿಕೆ ಒಡೆತನದಲ್ಲಿ 220 ಕೆರೆಗಳಿದ್ದು, ಇದರಲ್ಲಿ 19 ಕೆರೆಗಳು ಅಸ್ತಿತ್ವ ಕಳೆದುಕೊಂಡು ನಾಮಾವಶೇಷವಾಗಿವೆ. ಈ ಕೆರೆಗಳ ಜಾಗದಲ್ಲಿ ಬಿಡಿಎ ನಿರ್ಮಿತ ಬಡಾವಣೆಗಳು, ಖಾಸಗಿ ಲೇಔಟ್‌ಗಳು, ಶಾಲೆ, ದೇವಾಲಯ, ಬಸ್ ನಿಲ್ದಾಣ, ಡಿಪೊಗಳು ತಲೆ ಎತ್ತಿವೆ ಎಂದು ತಿಳಿದು ಬಂದಿದೆ.
ಬಿಡಿಎಯಿಂದಲೇ ಕೆರೆ ಒತ್ತುವರಿ: ಕಳೆದ ಕೆಲ ವರ್ಷಗಳಿಂದೀಚೆಗೆ ಪಾಲಿಕೆ ಸುಪರ್ದಿಯಲ್ಲಿದ್ದ 393.31 ಎಕರೆ ವಿಸ್ತೀರ್ಣದ 19 ಕೆರೆಗಳು ಕಣ್ಮರೆಯಾಗಿವೆ. ಅಲ್ಲೀಗ ಕೆರೆ ಇತ್ತೆಂಬುದಕ್ಕೆ ಸಣ್ಣ ಕುರುಹು ಸಹ ಕಾಣಸಿಗುವುದಿಲ್ಲ. 20.10 ಎಕರೆ ವಿಸ್ತೀರ್ಣ ಹೊಂದಿದ್ದ ವಿಜಿನಾಪುರ ಕೆರೆಯಲ್ಲಿ ಖಾಸಗಿ ಕಟ್ಟಡಗಳು, ಶಾಲೆ, ದೇವಾಲಯಗಳು ನಿರ್ಮಾಣಗೊಂಡಿವೆ.
ಬಿಳೇಕಹಳ್ಳಿ, ಬ್ಯಾಗುಂಟೆಪಾಳ್ಯ, ಲಿಂಗರಾಜಪುರ, ಗೆದ್ದಲಹಳ್ಳಿ, ಅಗ್ರಹಾರ ದಾಸರಹಳ್ಳಿ ಕೆರೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಕಬಳಿಸಿ ಬಡಾವಣೆಗಳನ್ನು ನಿರ್ಮಿಸಿದೆ. ಹೀಗಾಗಿ, ಈ ಕೆರೆಗಳು ಮೂಲ ಅಸ್ತಿತ್ವವನ್ನೇ ಕಳೆದುಕೊಂಡಿವೆ ಎನ್ನಲಾಗಿದೆ.
79 ಕೆರೆಗಳ ಸಮಗ್ರ ಅಭಿವೃದ್ಧಿ : ಪಾಲಿಕೆಯು ಕೋಟ್ಯಂತರ ರೂ ಖರ್ಚು ಮಾಡಿ 79 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದು, ಅವುಗಳ ಚಹರೆಯನ್ನೇ ಬದಲಿಸಲಾಗಿದೆ. ಕೆರೆಗಳಲ್ಲಿ ಹೂಳು ತೆರವುಗೊಳಿಸಿ, ನೀರಿನ ಸಂಗ್ರಹ ಸಾಮರ್ಥ್ಯವನ್ನು ಜಾಸ್ತಿ ಮಾಡಲಾಗಿದೆ. ಒಳ ಮತ್ತು ಹೊರ ಹರಿವಿನ ಕಾಲುವೆಗಳು, ಏರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕೆರೆ ಸುತ್ತಲೂ ವಾಯುವಿಹಾರ ಪಥವನ್ನು ನಿರ್ಮಿಸಿ, ತಂತಿಬೇಲಿ ಅಳವಡಿಸಲಾಗಿದೆ. ಇದರಿಂದ ಅಕ್ರಮವಾಗಿ ಕಸ ಸುರಿಯುವುದು ತಪ್ಪಿದೆ ಎಂದು ಪಾಲಿಕೆ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಸರಕಾರದಿಂದ 200 ಕೋಟಿ ರೂ ಅನುದಾನ: ರಾಜ್ಯ ಸರಕಾರವು 2019-20 ಮತ್ತು 20-21ನೇ ಸಾಲಿಗೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ 21 ಕೆರೆಗಳ ಅಭಿವೃದ್ಧಿಗೆ 200 ಕೋಟಿ ರೂ ಅನುದಾನ ಒದಗಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಜನರ ಮನೆ ಬಾಗಿಲಿಗೆ ಬರಲಿವೆ ಬೀದಿ ಬದಿಯ ತಿಂಡಿ - ತಿನಿಸುಗಳು: ಬಿಬಿಎಂಪಿಯ ಪ್ಲಾನ್ ಹೇಗಿದೆ ಗೊತ್ತಾ?