ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ನಡೆಸೋದು ಪ್ರತಿಷ್ಠೆ ವಿಷ್ಯ ಅಲ್ಲ ಹಟವೂ ಅಲ್ಲ, ಮಕ್ಕಳ ಭವಿಷ್ಯವಷ್ಟೇ ಮುಖ್ಯ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. ಇಂದು ಬೆಂಗಳೂರು ಬನಶಂಕರಿಯ ಡಿಎಸ್ಇಆರ್ಟಿಯಲ್ಲಿ 'ಬನ್ನಿ ವಿದ್ಯಾರ್ಥಿಗಳೇ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಬರೆಯೋಣ' ಎಂಬ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಈ ವೇಳೆ ಪರೀಕ್ಷೆ ರದ್ದು ಮಾಡೋದು ನಮಗೆ ಬಹಳ ಸುಲಭದ ಕೆಲಸ, ಯಾವುದೇ ಒತ್ತಡವೂ ಇರುತ್ತಿರಲಿಲ್ಲ. ಆದರೆ ಇದು ನಮ್ಮ ಕರ್ತವ್ಯವೆಂದು ತಿಳಿದು ಕಳೆದ ವರ್ಷವೂ ಈ ವರ್ಷವೂ ಪರೀಕ್ಷೆಯನ್ನ ನಡೆಸಲಾಗುತ್ತಿದೆ. ಶಿಕ್ಷಕರು, ಆರೋಗ್ಯ ಇಲಾಖೆ, ಪೋಷಕರು, ತಾಂತ್ರಿಕ ಸಲಹಾ ಸಮಿತಿ, ಸರ್ಕಾರ ಎಲ್ಲರ ಒಪ್ಪಿಗೆ ಮೇರೆಗೆ ನಡೆಸಲಾಗುತ್ತಿದೆ. ಪರೀಕ್ಷೆಗೆ 10 ದಿನಗಳು ಇರುವಾಗ ಗೊಂದಲ ಉಂಟುಮಾಡುವುದು ಒಳ್ಳೆಯದಲ್ಲ. ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಅದು ಬಿಟ್ಟು ಮಕ್ಕಳಿಗೆ ಆತಂಕ ಹೆಚ್ಚಿಸಬಾರದು. ಪರೀಕ್ಷೆ ನಡೆಸುತ್ತಿರುವ ಸಂಬಂಧ ಯಾವುದೇ ಲೇಬಲ್ ಅಂಟಿಸಬೇಡಿ ಅಂತ ಪರೀಕ್ಷಾ ವಿರೋಧಿಗಳಿಗೆ ಸಚಿವ ಸುರೇಶ್ ಕುಮಾರ್ ತಿರುಗೇಟು ನೀಡಿದರು.
ಪರೀಕ್ಷೆ ನಡೆಸಲು ಸಕಲ ಸಿದ್ಧತೆ:
ರಾಜ್ಯದಲ್ಲಿ ಕಳೆದ ವರ್ಷ ಜುಲೈನಲ್ಲಿ ಪಾಸಿಟಿವಿಟಿ ರೇಟ್ 13.2% ರಷ್ಟು ಇತ್ತು. ಇವತ್ತು 1.7% ನಷ್ಟು ಇದೆ. ಪರಿಸ್ಥಿತಿ ತಹಬದಿಗೆ ಬಂದರೆ ಪರೀಕ್ಷೆ ನಡೆಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದರು. ಅದರಂತೆ ಈಗ ಅನ್ಲಾಕ್ ಆಗಿದ್ದು, ಪರೀಕ್ಷೆಯನ್ನ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಇನ್ನು 1,33,926 ಸಿಬ್ಬಂದಿ ಪರೀಕ್ಷೆಗೆ ಕೆಲಸದಲ್ಲಿ ಭಾಗಿಯಾಗುತ್ತಿದ್ದು, ಇದರಲ್ಲಿ ಮೊದಲ ಡೋಸ್ ಲಸಿಕೆಯನ್ನು 1,30,522 ಹಾಗೂ ಎರಡನೇ ಡೋಸ್ ಅನ್ನ 48,930 ಪಡೆದಿದ್ದು, 3,404 ಮಂದಿ ವ್ಯಾಕ್ಸಿನೇಷನ್ ಪಡೆಯಬೇಕಿದೆ ಎಂದು ಮಾಹಿತಿ ನೀದಡಿದರು.
ಆತ್ಮವಿಶ್ವಾಸ ಹೆಚ್ಚಿಸಲು ಪರೀಕ್ಷೆ:
ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಶ್ನೆಗಳು ನೇರವಾಗಿ ಇರಲಿದೆ. ಹಾಗೇ ಪರೀಕ್ಷಾ ಕೇಂದ್ರದ ಕುರಿತು ಯಾವುದೇ ಆತಂಕ ಬೇಡ. ಇಂದು ನಡೆದ ಸಂವಾದದಲ್ಲಿ ಮಕ್ಕಳು ಹಲವು ಪ್ರಶ್ನೆ ಕೇಳಿದ್ದಾರೆ. ಹೀಗಾಗಿ ಸೋಮವಾರ ಈ ಕುರಿತು ಸಭೆ ನಡೆಸುತ್ತೇವೆ. ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆ ಇಲ್ಲ. ಎಲ್ಲಿ ಸೇವೆ ಇಲ್ಲವೋ ಅಲ್ಲಿ ಸೇವೆ ಆರಂಭ ಮಾಡಲು jio , airtel ಸೇರಿದಂತೆ ಎಲ್ಲರ ಜೊತೆ ಮಾತು ಕತೆ ಮಾಡುತ್ತೇನೆ ಎಂದು ತಿಳಿಸಿದರು.
ಭೌತಿಕ ತರಗತಿ ಆರಂಭ:
ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಆಗಿದ್ದು, 8-10 ದಿವಸದಲ್ಲೇ ಭೌತಿಕ ತರಗತಿ ಕುರಿತು ಮಾಹಿತಿ ನೀಡಲಾಗುವುದು. ತರಗತಿ ಹೇಗೆ ಆರಂಭ ಮಾಡಬೇಕು, ವಿದ್ಯಾಗಮ ಹೇಗೆ ನಡೆಸಬೇಕು ಎಂಬುದರ ವರದಿ ಪಡೆದು ತಿಳಿಸಲಾಗುವುದು ಎಂದರು.
ಕಳೆದ ವರ್ಷ ಪರೀಕ್ಷೆ ಯಶಸ್ವಿ:
ಅನೇಕ ಸಂಘ ಸಂಸ್ಥೆಗಳು, ಭಾರತ್ ಸ್ಕೌಟ್ಸ್ & ಗೈಡ್ಸ್ ತಂಡ ಪರೀಕ್ಷಾ ಕೇಂದ್ರದಲ್ಲಿ ಸಾಕಷ್ಟು ಕೆಲಸ ಮಾಡಿದರು. ಈ ಬಾರಿ ಕೂಡ ಪರೀಕ್ಷೆಯ ಯಶಸ್ವಿಗೆ ಮುಂದಾಗುತ್ತಿದ್ದಾರೆ. ಹಾಜರಾಗುವ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ಫೇಸ್ ಮಾಸ್ಕ್ ಉಚಿತವಾಗಿ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: SSLC ಪರೀಕ್ಷೆ ರದ್ದು ಕೋರಿ ಹೈಕೋರ್ಟ್ಗೆ ಪಿಐಎಲ್, ಜುಲೈ 12ಕ್ಕೆ ವಿಚಾರಣೆ
ಪರೀಕ್ಷೆ ರದ್ದು ಕೋರಿ ಕೋರ್ಟ್ ಮೊರೆ:
ಕಳೆದ ವರ್ಷ ಎಸ್ಓಪಿ ನೋಡಿ ಪರೀಕ್ಷೆ ನಡೆಸಲು ಹೈಕೋರ್ಟ್ ಕೂಡ ಹಸಿರು ನಿಶಾನೆ ಕೊಟ್ಟಿದ್ದರು. ನಂತರ ಸುಪ್ರೀಂಕೋರ್ಟ್ಗೆ ಹೋಗಿದ್ದಾಗ, ನಮ್ಮ ತಯಾರಿ ನೋಡಿ ಅಲ್ಲೂ ಪರೀಕ್ಷೆ ನಡೆಸಲು ಅನುಮತಿ ಕೊಟ್ಟಿತ್ತು. ಈ ಬಾರಿಯು ಹಲವರು ಕೋರ್ಟ್ ಮೊರೆ ಹೋಗ್ತಿದ್ದು ಅದು ನಮ್ಮ ಗಮನಕ್ಕೆ ಬಂದಿದ್ದು ಅದನ್ನ ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದರು.
ಪಿಯುಸಿ ಫಲಿತಾಂಶ:
ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 20 ರ ಆಸುಪಾಸಿನೊಳಗೆ ಪ್ರಕಟವಾಗಲಿರುವ ಕುರಿತು ಸಚಿವ ಸುರೇಶ್ ಕುಮಾರ್ ತಿಳಿಸಿದರು.