ಬೆಂಗಳೂರು: ದ್ವಿತೀಯ ಪಿಯುವರೆಗಿನ ಶಿಕ್ಷಣವೂ ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟ. ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತದೆ. ಆದರೆ, ಕೋವಿಡ್ ಕಾರಣ ಒಂದೂವರೆ ವರ್ಷದ ಶೈಕ್ಷಣಿಕ ಅವಧಿಯನ್ನು ಮಕ್ಕಳು ಕಳೆದುಕೊಂಡಿರುವುದು ಬಹಳ ಬೇಸರವಾಗಿದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಈಗ ಕೋವಿಡ್ ಸುರಕ್ಷತಾ ಕ್ರಮಗಳು, ತ್ವರಿತಗತಿಯ ಲಸಿಕೆ ಹಾಕುವಿಕೆ, ನಾಗರಿಕರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿರುವ ಕಾರಣ ಕೋವಿಡ್ ಭೀತಿ ಕಡಿಮೆಯಾಗಿ ಭೌತಿಕ ತರಗತಿಗಳನ್ನು ಪುನಾರಂಭಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದು, 9 ಮತ್ತು 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯು ಭೌತಿಕ ತರಗತಿಗಳು ಪುನಾರಂಭಕ್ಕೆ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಆಗಸ್ಟ್ 23ರಿಂದ ಶಾಲೆ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ತರಗತಿ ನಡೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳು ಊಟದ ಬಾಕ್ಸ್, ಬಾಟಲಿಯಲ್ಲಿ ಬಿಸಿ ನೀರು ತೆಗೆದುಕೊಂಡು ಹೋಗಬಹುದು. ಶಾಲೆಯಲ್ಲೂ ಬಿಸಿ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಶಾಲಾ, ಕಾಲೇಜುಗಳನ್ನು ಆರಂಭಿಸಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮಕ್ಕಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಚಿವ ಬಿ.ಸಿ ನಾಗೇಶ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ 11 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆ