ಬೆಂಗಳೂರು : ಡಿವೈಎಸ್ ಪಿ.ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ ಬಿ ರಿಪೋರ್ಟ್ ತಿರಸ್ಕರಿಸಿ ವಿಚಾರಣೆಗೆ ಹಾಜರಾಗುವಂತೆ ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ಅವರಿಗೆ ವಿಚಾರಣಾ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹಾಗೂ ನಗರದ ಜನ ಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ರದ್ದು ಕೋರಿ ಪ್ರಣಬ್ ಮೊಹಂತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ. ನರೇಂದರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿನ ಆರೋಪಗಳನ್ನು ಮೆರಿಟ್ ಆಧಾರದಲ್ಲಿ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಅರ್ಜಿ ಸಂಬಂಧ ಸಿಬಿಐ ಮತ್ತು ದೂರುದಾರರಾದ ಮೃತ ಗಣಪತಿ ಪುತ್ರ ನೇಹಲ್, ತಂದೆ ಎಂ. ಕೆ. ಕುಶಾಲಪ್ಪ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಸಿಬಿಐ ಅಧಿಕಾರಿಗಳ ಬಿ ರಿಪೋರ್ಟ್ ತಿರಸ್ಕರಿಸಿರುವ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಮೊಹಂತಿ ಅವರಷ್ಟೇ ಅಲ್ಲದೆ, ಮಾಜಿ ಸಚಿವ ಕೆ. ಜೆ. ಜಾರ್ಜ್ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಎ.ಎಂ. ಪ್ರಸಾದ್ ಅವರಿಗೂ ಸೆಪ್ಟೆಂಬರ್ 28ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಮನ್ಸ್ ಜಾರಿ ಮಾಡಿತ್ತು.