ಬೆಂಗಳೂರು: ಜೂನ್ 30ರಂದು ಒಂದೇ ದಿನ ದಾಖಲೆಯ 73 ರಸಗೊಬ್ಬರ ರೇಖ್ಗಳ ಸಂಚಾರಕ್ಕೆ ನೆರವು ನೀಡಿದ್ದಕ್ಕಾಗಿ ರೈಲ್ವೆ ಸಚಿವಾಲಯಕ್ಕೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಕೃತಜ್ಞತೆ ಸಲ್ಲಿಸಿ, ರಸಗೊಬ್ಬರ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈವರೆಗೆ ಸಾಗಾಣಿಕೆಯಾಗಿರುವ ರಸಗೊಬ್ಬರ ರೇಖ್ಗಳ ಪೈಕಿ, ಒಂದೇ ದಿನ ದಾಖಲೆಯ ಸಂಖ್ಯೆಯ ರಸಗೊಬ್ಬರ ರೇಖ್ಗಳು ಸಂಚಾರವಾಗಿವೆ. ಈ ವರ್ಷದ ಜೂನ್ ತಿಂಗಳಿನಲ್ಲಿ ಪ್ರತಿದಿನ ಸರಾಸರಿ 56.5 ರಸಗೊಬ್ಬರ ರೇಖ್ಗಳು ಸಂಚರಿಸಿವೆ. ಜೂನ್ ತಿಂಗಳಲ್ಲಿ ಇದು ಐತಿಹಾಸಿಕ ಸಾಧನೆಯಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸದಾನಂದಗೌಡ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರ, ರೈತರಿಗೆ ಸಕಾಲದಲ್ಲಿ ರಸಗೊಬ್ಬರವನ್ನ ಲಭ್ಯವಾಗುವಂತೆ ಮಾಡಲು ಬದ್ಧವಾಗಿದೆ. ಈವರೆಗೆ ಪ್ರಸಕ್ತ ಮುಂಗಾರು ಹಂಗಾಮಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ದೇಶಾದ್ಯಂತ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನ ಸ್ಥಿರವಾಗಿ ಪೂರೈಸುವುದನ್ನ ಖಾತ್ರಿಪಡಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.