ಬೆಂಗಳೂರು: ಹಿರಿಯ ವೈದ್ಯ ಹಾಗೂ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಸಂಸ್ಥಾಪಕ ಟ್ರಸ್ಟಿ ಡಾ ಎಲ್. ಶಿವಲಿಂಗಯ್ಯ ಕೊಲೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಲಿಂಗಯ್ಯ ಅವರ ಪುತ್ರ ಡಾ.ರವಿಪ್ರಕಾಶ್ ನೀಡಿದ ದೂರಿನ ಮೇರೆಗೆ ಸದಾಶಿವನಗರ ಠಾಣೆಯ ಪೊಲೀಸರು ಧಾನಮಣಿ ಮತ್ತು ವೆಂಕಟೇಶಮೂರ್ತಿ ಎನ್ನುವವರ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಶಿವಲಿಂಗಯ್ಯ ಮಣಿಪಾಲ್ ಆಸ್ಪತ್ರೆಯಲ್ಲಿ 2 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದ್ದರಿಂದ ಶಿವಲಿಂಗಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ದೇಹದಲ್ಲಿ ಜೀವಕ್ಕೆ ಅಪಾಯವಾಗುವಷ್ಟು ಅಲ್ಯೂಮಿನಿಯಂ ಅಂಶ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಮನುಷ್ಯರ ದೇಹದಲ್ಲಿ 10 ಎಂಐಸಿಜಿ/ಎಲ್‌ಕಿಂತ ಕಡಿಮೆ ಅಲ್ಯೂಮಿನಿಯಂ ಅಂಶ ಇರುತ್ತದೆ. ಆದರೆ, ಶಿವಲಿಂಗಯ್ಯ ಅವರ ದೇಹದಲ್ಲಿ 33.7 ಎಂಐಸಿಜಿ /ಎಲ್‌ನಷ್ಟು ಅಂಶ ಪತ್ತೆಯಾಗಿದೆ. ಹೀಗಾಗಿ ಉದ್ದೇಶ ಪೂರ್ವಕವಾಗಿಯೇ ಸುಮಾರು 15 ವರ್ಷಗಳಿಂದ ಶಿವಲಿಂಗಯ್ಯ ಜತೆಗಿರುವ ಧಾನಮಣಿ ಮತ್ತು 26 ವರ್ಷಗಳಿಂದ ಇರುವ ವೆಂಕಟೇಶ್‌ಮೂರ್ತಿ ಎನ್ನುವವರು ಕೃತ್ಯ ಎಸಗಿದ್ದಾರೆ ಎಂಬ ಅನುಮಾನದಲ್ಲಿ ಪುತ್ರ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆಸ್ತಿ ವಿಚಾರವಾಗಿ ವ್ಯಾಜ್ಯ: ಆಸ್ತಿ ವಿಚಾರವಾಗಿ ಕುಟುಂಬದವರ ನಡುವೆ ವ್ಯಾಜ್ಯವಿದೆ. ಆಸ್ತಿ ಕಬಳಿಸುವ ಉದ್ದೇಶದಿಂದ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ: ತಕರಾರು ಅರ್ಜಿ ವಜಾಗೊಳಿಸಿದ ಹೈಕೋರ್ಟ್