ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ದುರ್ಬಲವಾಗಿದೆ ಎನ್ನುವುದಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಆಡಿರುವ ಮಾತು ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ತಮ್ಮ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದರೂ ಸಹ ಬಿಜೆಪಿ ದುರ್ಬಲವಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ. ಬಿಜೆಪಿ ಅಭ್ಯರ್ಥಿಗಳು ಸೋಲುತ್ತಿದ್ದಾರೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಡ ಎಂದು ವ್ಯಂಗ್ಯವಾಡಿದರು.
ಶಿವಮೊಗ್ಗ ಸೇರಿದಂತೆ ಎಲ್ಲ ಕಡೆಗಳಲ್ಲೂ ಸಹ ಬಿಜೆಪಿ ದುರ್ಬಲವಾಗಿದೆ. ಜೆಡಿಎಸ್ ವಿರುದ್ಧ ಅರುಣ್ ಸಿಂಗ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇವರು ಅವರ ವಿರುದ್ಧ, ಆರ್ಎಸ್ಎಸ್ ವಿರುದ್ಧ ಸಾಕಷ್ಟು ಮಾತನಾಡಿದ್ದಾರೆ. ನಾವು ಮೊದಲಿಂದಲೂ ಬಿಜೆಪಿ ಜೊತೆ ಅಂತರ ಕಾಪಾಡಿಕೊಂಡಿದ್ದೇವೆ.
ಜೆಡಿಎಸ್ ಜೊತೆ ಸಾಕಷ್ಟು ಬಾರಿ ಹೊಂದಾಣಿಕೆ ಮೇಲೆ ಬೆಂಬಲ ಪಡೆದಿದ್ದೇವೆ, ಬೆಂಬಲ ನೀಡಿದ್ದೇವೆ. ಸೋತಿರಬಹುದು, ಇಲ್ಲ ಗೆದ್ದಿರಬಹುದು. ಆದರೆ, ಇಂದು ಬಿಜೆಪಿಗೆ ಜೆಡಿಎಸ್ ಎಷ್ಟು ಅನಿವಾರ್ಯವಾಗಿದೆ ಎನ್ನುವುದನ್ನು ಗಮನಿಸಿದಾಗ ಬಿಜೆಪಿ ದುರ್ಬಲವಾಗಿದೆಯೆಂದು ತಿಳಿಯುತ್ತದೆ ಎಂದರು.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಹೆಚ್‌ಡಿಕೆ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ: ಬಿಎಸ್‌ವೈ
ಬಿಜೆಪಿ ಹಾಗೂ ಜೆಡಿಎಸ್ ಸಖ್ಯದ ಬಗ್ಗೆ ಅರುಣ್ ಸಿಂಗ್, ಬಿಜೆಪಿ ಪಕ್ಷದ ಬೇರೆ ನಾಯಕರು ಮಾತನಾಡುತ್ತಿಲ್ಲ. ಇದು ಕೇವಲ ಯಡಿಯೂರಪ್ಪ ಅವರ ತೀರ್ಮಾನ. ಈ ತೀರ್ಮಾನ ಬಿಜೆಪಿ ದುರ್ಬಲವಾಗಿದೆ ಎನ್ನುವುದಕ್ಕೆ ಸಾಕ್ಷಿ.
ಆಂತರಿಕವಾಗಿ ಅವರಿಗೆ ಸಾಕಷ್ಟು ಸಮಸ್ಯೆಗಳು ಇದೆ. ಮಂಡ್ಯ, ಹಾಸನದಲ್ಲಿ ಜೆಡಿಎಸ್ ಜತೆ ಒಪ್ಪಂದ ಮಾಡಿಕೊಂಡಿದ್ದೆವು. ಆಗ ಬೇಸರಗೊಂಡು ಪಕ್ಷ ಬಿಟ್ಟು ಹೋದ ನಮ್ಮ ನಾಯಕರು ವಾಪಸ್ ಬಂದೇ ಇಲ್ಲ ಎಂದು ವಿವರಿಸಿದರು.
ಇದನ್ನೂ ಓದಿ: ಯಡಿಯೂರಪ್ಪ ಬೆಂಬಲ ನೀಡಿ ಎಂದಿದ್ದಾರಷ್ಟೇ, ಬಿಜೆಪಿ ಜತೆಗೆ ಮೈತ್ರಿ ಇಲ್ಲ: ಹೆಚ್‌ಡಿಕೆ ಸ್ಪಷ್ಟನೆ
ಇನ್ನೂ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.