ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಿರುವುದಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಇಂದು ರಾತ್ರಿ ಸಭೆ ಸೇರುವ ಬಗ್ಗೆ ಅತೃಪ್ತ ಶಾಸಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಅತೃಪ್ತ ಶಾಸಕರು ಸಭೆ ನಡೆಸಲಿದ್ದಾರೆ ಎನ್ನಲಾಗಿದ್ದು, ಎಂಎಲ್ಸಿ ಹೆಚ್. ವಿಶ್ವನಾಥ್, ಶಾಸಕರಾದ ಸತೀಶ್ ರೆಡ್ಡಿ, ತಿಪ್ಪಾರೆಡ್ಡಿ, ಸುನೀಲ್ ಕುಮಾರ್, ರಾಜುಗೌಡ ಸೇರಿದಂತೆ ಅನೇಕರು ಸಭೆ ಸೇರುವ ಸಾಧ್ಯತೆ ಇದೆ. ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ ಎನ್ನುವುದಕ್ಕಿಂತ ಸಿ.ಪಿ. ಯೋಗೀಶ್ವರ್ಗೆ ಅವಕಾಶ ನೀಡಿರುವುದು ಅತೃಪ್ತ ಶಾಸಕರನ್ನು ಕೆರಳಿಸಿದೆ. ಹಾಗಾಗಿ ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಠಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ-ನಷ್ಟಗಳನ್ನು ಆಲಿಸುತ್ತಿದ್ದ ಅನಂತಕುಮಾರ್ ಅವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ ಎಂದು ಶಾಸಕ ಸತೀಶ್ ರೆಡ್ಡಿ ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೂ ಟ್ಯಾಗ್ ಮಾಡಿದ್ದಾರೆ.