ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹತೆಗೊಳಿಸಿದ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ತೀರ್ಪಿನ ವಿರುದ್ಧ ಅನರ್ಹಗೊಂಡಿರುವ ಶಾಸಕರು ಇಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅನರ್ಹಗೊಂಡಿರುವ ಶಾಸಕರಾದ ಭೈರತಿ ಬಸವರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಪ್ರತಾಪ್ ಗೌಡ ಪಾಟೀಲ್, ಹೆಚ್.ವಿಶ್ವನಾಥ್, ನಾರಾಯಣಗೌಡ, ಕೆ.ಗೋಪಾಲಯ್ಯ ಅವರು ಅರ್ಜಿ ಸಲ್ಲಿಸಿ, ಸ್ಪೀಕರ್ ಆದೇಶ ರದ್ದುಪಡಿಸುವಂತೆ ಕೋರಿದ್ದಾರೆ.
ಅನರ್ಹತೆಗೆ ಮೊದಲು ವಿಧಾನಸಭಾಧ್ಯಕ್ಷರು ಶಾಸಕ ಸ್ಥಾನಕ್ಕೆ ತಾವುಗಳು ನೀಡಿದ ರಾಜೀನಾಮೆ ಬಗ್ಗೆ ನಿರ್ಧಾರ ತಗೆದುಕೊಳ್ಳಬೇಕಿತ್ತು. ಆದರೆ ಹಾಗೆ ಮಾಡದೇ ರಾಜೀನಾಮೆ ಪತ್ರವನ್ನು ಪರಿಗಣಿಸದೆ ಕಾಂಗ್ರೆಸ್ ಹಾಗೂ ಜೆಡಿಎಸ್ ನೀಡಿದ ದೂರಿನ ಆಧಾರದ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆ ಮಾಡಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ಸ್ಪೀಕರ್ ಅವರ ಆದೇಶ ರದ್ದುಪಡಿಸಿ ತಮ್ಮ ರಾಜೀನಾಮೆ ಅಂಗೀಕರಿಸಲು ಆದೇಶ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.
ಇನ್ನು ಸುಪ್ರೀಂಕೋರ್ಟ್ಗೆ ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅರ್ಜಿ ಸಲ್ಲಿಸಿದ್ದು, ನಾಳೆ ಅಥವ ಮುಂದಿನ ವಾರ ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ.