ಬೆಂಗಳೂರು: ಪಡಿತರ ಚೀಟಿದಾರರಿಗೆ ತಾಳೆ ಎಣ್ಣೆ, ಉಪ್ಪು, ಸಕ್ಕರೆ ಹಾಗೂ ತೊಗರಿ ಬೇಳೆ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಂತರ ವಿತರಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆದ್ಯತಾ ಪಡಿತರ ಚೀಟಿದಾರರ ಕುಟುಂಬದ ಪ್ರತಿ ಸದಸ್ಯರಿಗೆ ಈ ವರ್ಷದಿಂದ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ನೀಡುವ ನಿರ್ಧಾರವನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. 2016ರ ಸೆಪ್ಟೆಂಬರ್ನಿಂದ 25 ರೂಪಾಯಿಗೆ ಒಂದು ಲೀಟರ್ ತಾಳೆ ಎಣ್ಣೆ, 2016ರ ಅಕ್ಟೋಬರ್ನಿಂದ 2 ರೂಪಾಯಿಗೆ ಒಂದು ಕೆಜಿ ಉಪ್ಪು, 2017ರ ಮಾರ್ಚ್ನಿಂದ 15 ರೂಪಾಯಿಗೆ ಒಂದು ಕೆಜಿ ಸಕ್ಕೆರೆ, 2017 ಏಪ್ರಿಲ್ನಿಂದ 38 ರೂಪಾಯಿಗೆ ಒಂದು ಕೆಜಿ ತೊಗರಿ ಬೇಳೆ ಹಂಚಿಕೆ ಮಾಡಲಾಗುತ್ತಿತ್ತು.
2017ರ ಮೇ 15ರಂದು ಹೊಸ ಆದೇಶ ಹೊರಡಿಸಿ, ತಾಳೆ ಎಣ್ಣೆ, ಸಕ್ಕರೆ, ಉಪ್ಪು ವಿತರಿಸುವುದನ್ನ ನಿಲ್ಲಿಸಲಾಗಿದೆ. 2019ರ ಸೆಪ್ಟೆಂಬರ್ನಲ್ಲಿ ತೊಗರಿ ಬೇಳೆ ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಪೌಷ್ಟಿಕಾಂಶಗಳಿರುವ ದವಸ ಧಾನ್ಯ ಹಾಗೂ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವುದನ್ನು ಮುಂದುವರಿಸಬೇಕೆಂದು ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಒತ್ತಾಯಿಸಿದರು. ಆಗ ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸೋಲಾರ್ ಬೀದಿ ದೀಪ: ರಾಜ್ಯದಲ್ಲಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಕೆ ಮಾಡಲು ಆರ್ಥಿಕ ಸ್ಥಿತಿಗತಿ ಆಧರಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ಸಚಿವ ನಾರಾಯಣಗೌಡ, ಕಾಂಗ್ರೆಸ್ ಸದಸ್ಯ ಎಸ್.ಎನ್.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 59 ನಗರಸಭೆಗಳ ಪೈಕಿ 11ರಲ್ಲಿ, 116 ಪುರಸಭೆಗಳ ಪೈಕಿ 17ರಲ್ಲಿ, 95 ಪಟ್ಟಣ ಪಂಚಾಯ್ತಿಗಳ ಪೈಕಿ 20ರಲ್ಲಿ ಭಾಗಶಃ ಸೋಲಾರ್ ಬೀದಿ ದೀಪಗಳನ್ನ ಅಳವಡಿಸಲಾಗಿದೆ. ಒಟ್ಟು 48 ನಗರ ಸ್ಥಳೀಯ ಸಂಸ್ಥೆಗಳಲ್ಲಿ 2060 ಬೀದಿ ದೀಪಗಳ ಅಳವಡಿಕೆಯಿಂದ 2.59 ಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗಿ ವಾರ್ಷಿಕ 13.61 ಲಕ್ಷ ರೂ. ವಿದ್ಯುತ್ ಬಿಲ್ ಉಳಿಯುವ ಅಂದಾಜಿದೆ ಎಂದರು.