ಬೆಂಗಳೂರು : ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರವಾಗಿಲ್ಲ. ಆದರೆ, ಬಿಬಿಎಂಪಿ ಸರ್ಕಾರದ ಎಲ್ಲಾ ನಿರ್ಧಾರಕ್ಕೆ ಸಜ್ಜಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಗಾಂಧಿ ಜಯಂತಿ ಆಚರಣೆ ಹಿನ್ನೆಲೆ ಎಂ ಜಿ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮುಖ್ಯ ಆಯುಕ್ತರು ಇಂದು ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಗೌರವ್ ಗುಪ್ತಾ, ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್ ಕೊಡುವ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟ ನಿರ್ಧಾರ ಬಂದಿಲ್ಲ. ಕೇಂದ್ರ ಸರ್ಕಾರದಿಂದ ಇದು ಒಪ್ಪಿಗೆಯಾಗಿ ಬರಬೇಕಿದೆ. ಅನುಮತಿ ಸಿಕ್ಕಿದರೂ 12-18 ವರ್ಷ ವಯಸ್ಸಿನವರಿಗೆ ಮೊದಲು ಕೊಡಬೇಕಾಗುತ್ತದೆ.
ಲಸಿಕೆ ದಾಸ್ತಾನಿಗೆ ಎಲ್ಲಾ ವ್ಯವಸ್ಥೆ ಆಗಿದೆ. 2 ಲಕ್ಷಕ್ಕಿಂತ ಹೆಚ್ಚು ಲಸಿಕೆ ಕೊಡುವ ಕೆಲಸವನ್ನು ಈವರೆಗೆ ಮಾಡಲಾಗಿದೆ. ಶೇ.85ರಷ್ಟು ಮೊದಲ ಡೋಸ್ ಹಾಗೂ ಶೇ.45ರಷ್ಟು 2ನೇ ಡೋಸ್ ಕೂಡ ಈವರೆಗೆ ಪೂರ್ಣಗೊಳಿಸಲಾಗಿದೆ ಎಂದರು.
ಪಾಲಿಕೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಯಿದೆ. ಭೂ ಭರ್ತಿ ಕೇಂದ್ರಗಳು ಭರ್ತಿಯಾಗುತ್ತಾ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಬಂಡವಾಳಕ್ಕಾಗಿ ಸರ್ಕಾರದ ಮಟ್ಟದಲ್ಲಿ ಅನುದಾನ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಹೊಸ ಜಾಗಗಳನ್ನು ಗುರುತು ಮಾಡಬೇಕಿದೆ ಎಂದರು.
ಲಸಿಕೆ ಪಡೆದ ಬಳಿಕವೂ ಕೋವಿಡ್ ಹೆಚ್ಚಾಗುತ್ತಿದ್ದು, ಬ್ರೇಕ್ ಥ್ರೂ ಇನ್ಫೆಕ್ಷನ್ ಆಗುತ್ತಿದೆ. ಇದರಲ್ಲಿ ಭೀಕರತೆ ಇರುವುದಿಲ್ಲ. ಆದರೆ, ಸಂಖ್ಯೆ ಗೊತ್ತಾಗುತ್ತಿದೆ. ಆಸ್ಪತ್ರೆಗೆ ಹೋಗದೆ ಗುಣಮುಖರಾಗಬಹುದು.
ಈ ಬಗ್ಗೆ ತಜ್ಞರ ಜೊತೆ ಚರ್ಚೆ ನಡೆಯುತ್ತಿದೆ. ಎಷ್ಟು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ಐಸಿಯು ಅಗತ್ಯ ಬೀಳುತ್ತಿದೆ, ಎಷ್ಟು ಡೋಸ್ ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಗೌರವ್ ಗುಪ್ತಾ ತಿಳಿಸಿದರು.
ಶೇ.14-15ರಷ್ಟು ಜನರಿಗೆ ಇನ್ನೂ ವ್ಯಾಕ್ಸಿನ್ ಹಂಚಬೇಕಿದೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಇನ್ನು, ದಸರಾ ಆಚರಣೆಗೆ ಸರ್ಕಾರದ ಮಟ್ಟದಿಂದ ಮಾರ್ಗಸೂಚಿ ಬರಲಿದೆ ಎಂದರು. ಈ ವೇಳೆ ವಿಶೇಷ ಆಯುಕ್ತರುಗಳಾದ ಡಿ.ರಂದೀಪ್, ತುಳಸಿ ಮದ್ದಿನೇನಿ, ಮನೋಜ್ ಜೈನ್, ಡಾ. ಹರೀಶ್‌ಕುಮಾರ್, ದಯಾನಂದ್, ಬಸವರಾಜು, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಷ ಪ್ರಸಾದ ದುರಂತ ಪ್ರಕರಣ: ಜಾಮೀನು ಅರ್ಜಿ ಸಲ್ಲಿಸಿದ 2ನೇ ಆರೋಪಿ ಅಂಬಿಕಾ