ಬೆಂಗಳೂರು: ನ್ಯಾಯಾಲಯದ ತಡೆ ಆದೇಶವಿದ್ದರೂ ಕಾರವಾರ ವಾಣಿಜ್ಯ ಬಂದರು ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ ಪ್ರಮಾಣಪತ್ರ ಸಲ್ಲಿಸಿ ಎಂದು ಹೈಕೋರ್ಟ್ ಅರ್ಜಿದಾರರಿಗೆ ಸೂಚನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ‘ಬೈತಕುಳ ಬಂದರು ನಿರಾಶ್ರಿತರ ಯಾಂತ್ರಿಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ತಡೆ ಆದೇಶವಿದ್ದರೂ ಬಂದರು ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ಮುಂದುವರೆದಿದೆ ಎಂದು ಆರೋಪಿಸಿದರು. ಪ್ರತಿ ವಾದ ಮಂಡಿಸಿದ ಸರ್ಕಾರದ ಪರ ವಕೀಲರು, ಅಂತಹ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಾಮಗಾರಿ ನಡೆಯುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಿದ್ದಾರೆ. ಇಲ್ಲ ಎಂದು ಸರ್ಕಾರದ ಪರ ವಕೀಲರು ವಾದಿಸುತ್ತಿದ್ದಾರೆ. ಆದ್ದರಿಂದ ಒಂದೊಮ್ಮೆ ನ್ಯಾಯಾಲಯದ ತಡೆಯ ವಿರುದ್ಧವಾಗಿ ಕಾಮಗಾರಿಗಳು ನಡೆಯುತ್ತಿದ್ದರೆ ಆ ಸಂಬಂಧ ಪ್ರಮಾಣಪತ್ರ ಸಲ್ಲಿಸಿ, ನಂತರ ಈ ಸಂಬಂಧ ವಿಚಾರಣೆ ನಡೆಸೋಣ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.